

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ಕಸಸಂಗ್ರಹಣಾ ವಾಹನಗಳಿಗೆ ಸ್ವಯಂ ವಾಹನ ಚಲಾಯಿಸುವ ಮೂಲಕ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು.
ಮಹಾತ್ಮ ಗಾಂಧೀಜಿ ಅವರ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ಮಕ್ಕಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಸ್ವಚ್ಛತೆಯನ್ನು ಮೈಗೂಡಿಸಿಕೊಂಡು ಮನೆ, ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಡ್ಡಾಯವಾಗಿ ಕಸ ಬೇರ್ಪಡಿಸಿ ಕಸಸಂಗ್ರಹಣಾ ವಾಹನಗಳಿಗೆ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಶೌಚಗೃಹ ಬಳಕೆ ಮಾಡಬೇಕು ಎಂದು ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದರು. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಸ್ವಚ್ಛತೆ ಕಾಪಾಡಲು ಸರ್ಕಾರವು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಾರ್ವಜನಿಕರು ಸಹಕರಿಸಿ, ಸದುಪ ಯೋಗಪಡಿಸಿಕೊಳ್ಳಬೇಕು ಎಂದರು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು, ಒಣ ಕಸ ಹಾಗೂ ಹಸಿ ಕಸ ವಿಂಗಡಿಸಿ, ಘನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ತೆಗೆದುಕೊಂಡು ಹೋಗಲು ಪ್ರತಿ ಗ್ರಾಮಗಳಿಗೆ ತ್ಯಾಜ್ಯ ವಿಲೇವಾರಿ ವಾಹನ ನೀಡಲಾಗಿದ್ದು, ಈಗ ಗ್ರಾಮಗಳ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಿ ಎಂದರು.