

ರಾಜ್ಯದಲ್ಲಿ ಬಡವರಿಗೆ ಸ್ವಂತ ಸೂರು ಕಲ್ಪಿಸಿಕೊಡಲು ವಿವಿಧ ಯೋಜನೆ ರೂಪಿಸಿರುವ ರಾಜೀವ್ ಗಾಂಧಿ ವಸತಿ ನಿಗಮವು ಫಲಾನುಭವಿಗಳ ದಾಖಲೆಗಳಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ 2.73 ಲಕ್ಷ ಮನೆ ನಿರ್ವಣಕ್ಕೆ ಬ್ರೇಕ್ ಹಾಕಿದೆ.
ಬಸವ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಸೇರಿ ರಾಜೀವ್ ಗಾಂಧಿ ವಸತಿ ನಿಗಮದ ಕೆಲ ಯೋಜನೆಗಳಲ್ಲಿ ವಸತಿ ನಿರ್ವಣಕ್ಕೆ ಅನುದಾನ ನೀಡಲಾಗುತ್ತದೆ. ಇದು ದುರುಪಯೋಗವಾಗದಂತೆ ತಡೆಯಲು ತಂತ್ರಾಂಶ ರೂಪಿಸಲಾಗಿದೆ. ಈ ತಂತ್ರಾಂಶವು 2.73 ಲಕ್ಷ ಫಲಾನುಭವಿಗಳ ದಾಖಲೆಗಳಲ್ಲಿ ಲೋಪ ಪತ್ತೆ ಹಚ್ಚಿದ್ದು, ಮನೆ ನಿರ್ವಣಕ್ಕೆ ತಾತ್ಕಾಲಿಕವಾಗಿ ತಡೆ ಹಾಕಿದೆ. ನಿಗಮದ ಹಂತದಲ್ಲಿ ಜಿಪಿಎಸ್ ಛಾಯಾಚಿತ್ರಗಳನ್ನು ಆಧರಿಸಿ ಅನರ್ಹರನ್ನು ಗುರುತಿಸಲಾಗಿದೆ. ಮಾ.14ರ ಒಳಗೆ ಸೂಕ್ತ ದಾಖಲೆ ನೀಡಿದವರಿಗಷ್ಟೇ ಅನುದಾನ ಸಿಗಲಿದೆ.
ಹೇಗೆಲ್ಲ ಅಕ್ರಮ ನಡೆದಿದೆ?: ಹಲವು ವರ್ಷಗಳ ಹಿಂದೆ ನಿರ್ವಿುಸಿರುವ ಹಳೇ ಮನೆಗಳನ್ನು ಜಿಪಿಎಸ್ಗೆ ಅಳವಡಿಸಿರುವ ಕಾರಣ ಮತ್ತು ಮನೆ ನಿರ್ವಣಕ್ಕೆ ಸಂಬಂಧಪಟ್ಟಂತೆ 4 ಹಂತದ ಜಿಪಿಎಸ್ ಛಾಯಾಚಿತ್ರಗಳನ್ನು ಅಳವಡಿಸದೆ, ಹಾಲಿ ಇರುವ ಮನೆಗಳನ್ನೇ ಜಿಪಿಎಸ್ಗೆ ಅಳವಡಿಸಿರುವ 1,583 ಪ್ರಕರಣ ಗುರುತಿಸಿ, ಅನುದಾನ ತಡೆ ಹಿಡಿಯಲಾಗಿದೆ.
ನಿಯಮಾನುಸಾರ ಸರ್ಕಾರವು ಪ್ರತಿ ಮನೆಗೆ ನೀಡುವ ಸಹಾಯಧನದ ಜತೆಗೆ ಫಲಾನುಭವಿಗಳು ಸ್ವಂತ ಹಣ ಬಳಸಿಕೊಂಡು ಗರಿಷ್ಠ 5 ಲಕ್ಷ ರೂ.ವರೆಗೆ ವೆಚ್ಚಮಾಡಿ ಮನೆ ನಿರ್ವಿುಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ, ಕೆಲ ಫಲಾನುಭವಿಗಳು 6 ರಿಂದ 20 ಲಕ್ಷ ರೂ.ಗೂ ಅಧಿಕ ಹಣ ವಿನಿಯೋಗಿಸಿ ಮನೆ ನಿರ್ವಿುಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇಂಥ 410 ಪ್ರಕರಣ ಗುರುತಿಸಿ ಇವರನ್ನು ಅನರ್ಹರೆಂದು ಪರಿಗಣಿಸಿ ಅನುದಾನ ತಡೆಹಿಡಿಯಲಾಗಿದೆ.
ವಾಸಕ್ಕೆ ಈಗಾಗಲೆ ಸ್ವಂತ ಮನೆ ಹೊಂದಿದ್ದರೂ ಅದನ್ನು ಮರೆಮಾಚಿ ಯೋಜನೆಯ ಲಾಭ ಪಡೆದುಕೊಳ್ಳಲು ಮುಂದಾದ 49 ಪ್ರಕರಣ ಬೆಳಕಿಗೆ ಬಂದಿವೆ. 185 ಮನೆಗಳನ್ನು ವಾಸೇತರ ಉದ್ದೇಶಕ್ಕಾಗಿ ಬಳಸಿಕೊಂಡಿರುವುದೂ ಕಂಡು ಬಂದಿದೆ. ರಾಜ್ಯಾದ್ಯಂತ ಫಲಾನುಭವಿ ಹೆಸರಿನ ಜತೆಗೆ ಅವರ ಪತಿ, ತಂದೆಯ ಹೆಸರನ್ನು ತಂತ್ರಾಂಶ ತಾಳೆ ನೋಡುತ್ತದೆ. ಸಂಪೂರ್ಣ ಸಾಮ್ಯತೆ ಜತೆಗೆ ಒಂದೆರಡು ಅಕ್ಷರ, ಇನಿಷಿಯಲ್ ವ್ಯತ್ಯಾಸವಿರುವುದನ್ನೂ ಗುರುತಿಸಲಾಗುತ್ತದೆ. ಜಿಪಿಎಸ್ ಫೋಟೋ ಅಳವಡಿಸದಿರುವುದು ಸೇರಿ ಅನೇಕ ಕಾರಣಕ್ಕೆ ಅನುದಾನ ತಡೆ ಹಿಡಿಯಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಅವಕಾಶ: ಅನುದಾನ ತಡೆ ಹಿಡಿಯಲಾದ ಫಲಾನುಭವಿಗಳಿಗೆ ಮಾ.14ರ ವರೆಗೆ ದಾಖಲೆ ಸಲ್ಲಿಸಲು ಅವಕಾಶ ನಿಡಲಾಗಿದೆ. ಈಗಾಗಲೇ ಫಲಾನುಭವಿಗಳನ್ನು ಸಂರ್ಪಸಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ವಾಸ್ತವಿಕವಾಗಿ ನಿರ್ವಣಗೊಂಡಿರುವ ಮನೆಯು ಅರ್ಹವಿರುವುದು ಕಂಡು ಬಂದಲ್ಲಿ, ಸ್ಥಳೀಯ ಸಂಸ್ಥೆ ಅಥವಾ ತಾಲೂಕು ಮಟ್ಟದ ಅಧಿಕಾರಿಗಳ ದೃಢೀಕರಣದೊಂದಿಗೆ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಅಥವಾ ಜಿಲ್ಲಾಧಿಕಾರಿ ಮೂಲಕ ಅನುಮೋದಿಸಿ ಆನ್ಲೈನ್ನಲ್ಲಿ ನಿಗಮಕ್ಕೆ ಸಲ್ಲಿಸುತ್ತಾರೆ. ಅರ್ಹರಿದ್ದಲ್ಲಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
17 ಸಾವಿರ ಕೋಟಿ ರೂ. ಖರ್ಚು
ರಾಜ್ಯದಲ್ಲಿ ವಿವಿಧ ಯೋಜನೆಗಳಲ್ಲಿ ಮನೆ ನಿರ್ವಿುಸಲು 2016-17ನೇ ಸಾಲಿನಿಂದ 2019-20ನೇ ಸಾಲಿನ ಜನವರಿ ಅಂತ್ಯದವರೆಗೆ 17,004.89 ಕೋಟಿ ರೂ. ಖರ್ಚು ಮಾಡಲಾಗಿದೆ. ಮೂರು ವರ್ಷಗಳಲ್ಲಿ ವಿವಿಧ ವಸತಿ ಯೋಜನೆಯಲ್ಲಿ 12,43,757 ಮನೆ ಮಂಜೂರು ಮಾಡಲಾಗಿದ್ದು, ಇದರಲ್ಲಿ 5,41,683 ಮನೆ ಪೂರ್ಣಗೊಂಡಿವೆ. 3,66,973 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದರೆ, 3,15,191 ಮನೆಗಳ ಆರಂಭಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಫಲಾನುಭವಿಗಳು ನಿಗಮಕ್ಕೆ ದಾಖಲೆ ಸಲ್ಲಿಸಿದರೂ ಸಮಯಕ್ಕೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ಸಲ್ಲಿಸಿದ ದಾಖಲೆಯಲ್ಲೂ ಲೋಪ ಕಂಡು ಬಂದ 2.73 ಲಕ್ಷ ಮನೆ ನಿರ್ವಣಕ್ಕೆ ಬಿಡುಗಡೆಯಾಗಬೇಕಿದ್ದ ಅನುದಾನ ತಡೆ ಹಿಡಿದಿರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅನರ್ಹರಿಗೆ ವಿಜಿಲ್ ಆಪ್ ಬಿಸಿ!
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿಗಳಲ್ಲಿ ಅಕ್ರಮವಾಗಿ ಮನೆ ನಿರ್ವಿುಸಿಕೊಂಡಿರುವ ಹಾಗೂ ಅನುದಾನ ದುರ್ಬಳಕೆ ಮಾಡಿಕೊಂಡಿರುವವರಿಗೆ ಇದೀಗ ವಸತಿ ವಿಜಿಲ್ ಆಪ್ ಬಿಸಿ ಮುಟ್ಟಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಲಕ್ಷಕ್ಕೂ ಅಧಿಕ ಮನೆಗಳ ಪೈಕಿ ಪ್ರಾಯೋಗಿಕವಾಗಿ 15 ಸಾವಿರ ಮನೆಗಳನ್ನು ವಸತಿ ವಿಜಿಲ್ ಆಪ್ ಮೂಲಕ ಪರಿಶೀಲನೆ ನಡೆಸಲಾಗುತ್ತಿದ್ದು, ಈ ವೇಳೆ ಅಕ್ರಮವಾಗಿ ನಿರ್ವಣಗೊಂಡಿರುವ ಮನೆಗಳು ಅಪಾಯಕ್ಕೆ ಸಿಲುಕಲಿವೆ.
ರಾಜ್ಯದಲ್ಲಿ ಕಂದಾಯ ಇಲಾಖೆಯ ಗ್ರಾಮಠಾಣ, ರುದ್ರಭೂಮಿ, ಸಾರ್ವಜನಿಕ ರಸ್ತೆ, ಆರ್ಡಿಪಿಆರ್ ಇಲಾಖೆಯು ಸಾರ್ವಜನಿಕರಿಗೆ ಮೀಸಲಿಟ್ಟ ಆಸ್ತಿ, ಉದ್ಯಾನಗಳ ಜಾಗದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನಿರ್ಮಾಣ ಮಾಡಿಕೊಂಡಿರುವ 5430ಕ್ಕೂ ಅಧಿಕ ಮನೆಗಳನ್ನು ವಿಜಿಲ್ ಆಪ್ ಮೂಲಕ ಪತ್ತೆ ಹಚ್ಚಲಾಗಿದೆ.
ಕೆಲ ಅನರ್ಹ ಫಲಾನುಭವಿಗಳು ನಕಲಿ ದಾಖಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸರ್ಕಾರಿ ಕಚೇರಿ ಹಾಗೂ ಶಾಸಕರ ಮನೆಗಳಿಗೆ ಅಲೆದಾಡುತ್ತಿದ್ದಾರೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಪ್ರಕಾರ ರಾಜ್ಯದಲ್ಲಿ 16.68 ಲಕ್ಷಕ್ಕೂ ಅಧಿಕ ಕುಟುಂಬಗಳು ಈಗಲೂ ಗುಡಿಸಲು ಹಾಗೂ ಜೋಪಡಿಗಳಲ್ಲಿ ವಾಸಿಸುತ್ತಿವೆ. ಇದನ್ನು ಹೋಗಲಾಡಿಸಲು ಸರ್ಕಾರಗಳೇನೋ ವಿವಿಧ ವಸತಿ ಯೋಜನೆಗಳಲ್ಲಿ ಅನುದಾನ ನೀಡುತ್ತಿವೆ.
ಆದರೆ, ವಾಸ್ತವದಲ್ಲಿ ಅರ್ಹ ಫಲಾನುಭವಿಗಳು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಪ್ರಭಾವಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ವಸತಿ ಯೋಜನೆಗಳಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅನರ್ಹ ಫಲಾನುಭವಿಗಳು ಪತ್ತೆಯಾಗುತ್ತಿದ್ದಾರೆ ಎಂದು ವಸತಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
| ಅವಿನಾಶ್ ಮೂಡಂಬಿಕಾನ ಬೆಂಗಳೂರು/ ಮಂಜುನಾಥ ಕೋಳಿಗುಡ್ಡ ಬೆಳಗಾವಿ