ಮನೆ ಕುಸಿದು ಮಹಿಳೆಗೆ ಗಂಭೀರ ಗಾಯ

ಹುಲುಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ವಡ್ಡರ ಕಾಲನಿ ಗ್ರಾಮದಲ್ಲಿ ಸಂಪೂರ್ಣ ನೆಲಕ್ಕುರುಳಿದ ಗಂಗಾಭೋವಿ ಅವರಿಗೆ ಸೇರಿದ ಮನೆ ಗೋಡೆ.
03 Hg Photo
Published on

ಹಗರೆ: ಮಾದೀಹಳ್ಳಿ ಹೋಬಳಿಯ ಹುಲುಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ವಡ್ಡರ ಕಾಲನಿ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು ನಾಲ್ವರು ಗಾಯಗೊಂಡಿದ್ದಾರೆ.

ಗಂಗಾಭೋವಿ ಮತ್ತು ಇವರ ಇಬ್ಬರು ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ಪತ್ನಿ ಸಲ್ಲಾಪುರಿ ಅವರಿಗೆ ಗಂಭೀರ ಗಾಯಗಳಾಗಿವೆ.

ಮಂಗಳವಾರ ತಡರಾತ್ರಿ ಸುರಿದ ಗಾಳಿ ಮಳೆಗೆ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಮನೆ ಒಳಗೆ ನಿದ್ರೆ ಮಾಡುತ್ತಿದ್ದ ಗಂಗಾಭೋವಿ ಮತ್ತು ಪತ್ನಿ ಸಲ್ಲಾಪುರಿ, ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಗ್ರಾಮಸ್ಥರು ಇವರನ್ನು ರಕ್ಷಿಸಿ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಗಾ ಭೋವಿ ಅವರಿಗೆ ಸಣ್ಣಪುಟ್ಟ ಪೆಟ್ಟಾದರೆ ಪತ್ನಿಗೆ ಕೈ ಮೂಳೆ ಮುರಿದಿದ್ದು, ಗಂಭೀರ ಗಾಯಗಳಾಗಿವೆ. ಮಕ್ಕಳಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದವಸ-ಧಾನ್ಯಗಳು ಮಣ್ಣು ಪಾಲಾಗಿವೆ. ಆಹಾರ ಸಾಮಗ್ರಿಗಳು ನೀರು ಪಾಲಾಗಿವೆ. ಹನಿಕೆ ಗ್ರಾಮದ ಸೋಮಯ್ಯ, ಟಿ.ವಡ್ಡರ ಕಾಲನಿ ಗ್ರಾಮದ ಮಾರ್ಗಭೋವಿ, ಪಾದ್ಗಭೋವಿ ಎಂಬುವರ ಮನೆಗಳು ಮಳೆಯ ಅಬ್ಬರಕ್ಕೆ ನೆಲಕ್ಕುರುಳಿವೆ.

ಸ್ಥಳಕ್ಕೆ ಕಂದಾಯಾಧಿಕಾರಿ ಹಾಗೂ ಹುಲುಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್, ಪಿಡಿಒ ದೇವರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net