ಮನೆ ಕಸ ಮಾದರಿಯಲ್ಲೇ ಇ-ತ್ಯಾಜ್ಯ ಸಂಗ್ರಹ

17
Published on

ಮೈಸೂರು: ಮನೆಗಳಿಂದ ಕಸ ಸಂಗ್ರಹ ಮಾದರಿಯಲ್ಲೇ ಇ-ತ್ಯಾಜ್ಯವನ್ನೂ ಸಂಗ್ರಹಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀ ಕಾಂತರೆಡ್ಡಿ ಹೇಳಿದರು.

ಪಾಲಿಕೆ ಆವರಣದಲ್ಲಿ ಸೋಮವಾರ ಇ-ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯನ ಆರೋಗ್ಯ ಮತ್ತು ಪರಿಸರಕ್ಕೆ ಮಾರಕವಾಗಿರುವ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪಾಲಿಕೆಯಿಂದ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಇ-ತ್ಯಾಜ್ಯ ಸಂಗ್ರಹಿಸುವ ವಾಹನ ಬಳಸಿಕೊಳ್ಳಲಾಗುವುದು ಎಂದರು.

ಇಂದಿನಿಂದ ಒಂದು ವಾರ ನಗರಾದ್ಯಂತ ಇ-ತ್ಯಾಜ್ಯ ಸಂಗ್ರಹ ವಾಹನಗಳು 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಸಂಚರಿಸಲಿವೆ. ಸಾರ್ವಜನಿಕರು ತಮ್ಮಲ್ಲಿರುವ ಕೆಟ್ಟುಹೋದ ಟಿವಿ, ಕಂಪ್ಯೂಟರ್, ಮೊಬೈಲ್ ಫೋನ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಪಾಲಿಕೆ ಇ-ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಬೇಕು. ಈ ರೀತಿ ಸಹಕರಿಸುವ ಮೂಲಕ ಮೈಸೂರನ್ನು ಮತ್ತೊಮ್ಮೆ ಸ್ವಚ್ಛ ನಗರಿಯನ್ನಾಗಿ ರೂಪಿಸಲು ಕೈಜೋಡಿಸಬೇಕು ಎಂದು ಕೋರಿದರು.

ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿಗಳಲ್ಲಿ ಪ್ರಮುಖವಾಗಿ ಇ-ತ್ಯಾಜ್ಯಗಳನ್ನೂ ಸಂಗ್ರಹ ಮಾಡಲಾಗುವುದು ಎಂದರು.
ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ ಮಾತನಾಡಿ, ಸಾರ್ವಜನಿಕರು ಯಾವುದೇ ಕಾರಣಕ್ಕೂ ಇ-ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕಬಾರದು. ಪಾಲಿಕೆ ಈ ವಾಹನಕ್ಕೆ ನೀಡುವ ಮೂಲಕ ನಗರದ ಸೌಂದರ್ಯ ಹಾಗೂ ಪರಿಸರ ಕಾಪಾಡಬೇಕು ಎಂದರು.
ಈ ವಾಹನಗಳು ಸಂಗ್ರಹ ಮಾಡುವ ಇ-ತ್ಯಾಜ್ಯಗಳನ್ನು ಪಾಲಿಕೆ ಗೊತ್ತು ಮಾಡಿದ ಖಾಸಗಿ ಸಂಸ್ಥೆಗೆ ಒಪ್ಪಿಸಿ ನಂತರ ಇವುಗಳನ್ನು ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.

ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಮಾತನಾಡಿ, ಇ-ತ್ಯಾಜ್ಯಗಳು ಹೆಚ್ಚಾಗಿ ಸಂಗ್ರಹವಾಗಬಹುದಾದ ಶಾಲಾ ಕಾಲೇಜು, ಎಲೆಕ್ಟ್ರಾನಿಕ್ ಉದ್ಯಮಗಳು, ಕಾರ್ಖಾನೆಗಳು, ಅಂಗಡಿಗಳು ಮುಂತಾದ ಸ್ಥಳಗಳನ್ನು ಗುರುತಿಸಲಾಗಿದೆ. ಕಳೆದ ಬಾರಿ ಸುಮಾರು 3 ಟನ್ ಇ-ತ್ಯಾಜ್ಯ ಸಂಗ್ರಹವಾಗಿತ್ತು. ಈ ಸಲ 5 ಟನ್ ಸಂಗ್ರಹವಾಗಬಹುದೆಂದು ಅಂದಾಜಿಸಲಾಗಿದೆ ಎಂದರು.
ಪ್ರತಿ ಮನೆಯಲ್ಲೂ ಇ-ತ್ಯಾಜ್ಯಗಳು ಉತ್ಪತ್ತಿಯಾಗುತ್ತಿವೆ. ಪ್ಲಾಸ್ಟಿಕ್, ಲೆಡ್, ಕ್ಯಾಡ್ಮಿಯಂ ಮುಂತಾದ ವಸ್ತುಗಳನ್ನು ಸುಡುವುದರಿಂದ ಉತ್ಪತ್ತಿಯಾಗುವ ವಿಷಕಾರಿ ಗಾಳಿಯು ಪರಿಸರದಲ್ಲಿ ಸೇರಿಕೊಂಡು ಮನುಷ್ಯನಿಗೆ ಕ್ಯಾನ್ಸರ್‌ನಂತರ ಮಾರಕ ಕಾಯಿಲೆ ಕಾರಣವಾಗಬಹುದು. ಅಲ್ಲದೆ ನೀರು ಮತ್ತು ಪರಿಸರಕ್ಕೂ ಹಾನಿಯಾಗುತ್ತದೆ. ಇದನ್ನು ತಪ್ಪಿಸಲು ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತದೆ ಎಂದರು.

ಎಇಇ ಮೃತ್ಯುಂಜಯ್ಯ, ಪರಿಸರ ಇಂಜಿನಿಯರ್‌ಗಳಾದ ಮೋಹನ್, ಚೇತನ್, ಶ್ರೀದೇವಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net