ಮನೆ, ಆಸ್ಪತ್ರೆ ಆವರಣಕ್ಕೆ ನುಗ್ಗಿದ ನೀರು

ald rain
ಆಲ್ದೂರು ಸರ್ಕಾರಿ ಆಸ್ಪತ್ರೆ ಆವರಣದೊಳಗೆ ನೀರು ನುಗ್ಗಿರುವುದು.
Published on

ಆಲ್ದೂರು: ಮಲೆನಾಡು ಭಾಗದಲ್ಲಿ ಮಂಗಳವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದ ಕೆಲವು ರಸ್ತೆಗಳ ಮೇಲೆ ಹಳ್ಳದಂತೆ ನೀರು ಹರಿದು ವಾಹನ ಓಡಾಟಕ್ಕೆ ತೊಂದರೆಯಾಯಿತು. ಸೋಮವಾರ ಸಂಜೆ ಆರಂಭವಾದ ಮಳೆ ಮಂಗಳವಾರ ಮಧ್ಯಾಹ್ನದವರೆಗೆ ಸುರಿಯಿತು.

ಮಂಗಳವಾರ ಬೆಳಗ್ಗೆ ಜೋರು ಮಳೆಗೆ ಪಟ್ಟಣದ ಮುಖ್ಯ ರಸ್ತೆ, ಬಾಳೆಹೊನ್ನೂರು ರಸ್ತೆ, ಅಂಬೇಡ್ಕರ್ ವೃತ್ತದ ರಸ್ತೆಯಲ್ಲಿ ನೀರು ಹಳ್ಳದಂತೆ ಹರಿದ ಪರಿಣಾಮ ವಾಹನ ಓಡಾಟಕ್ಕೆ ತೊಂದರೆ ಉಂಟಾಯಿತು. ಪಟ್ಟಣದ ಮೇದರ ಬೀದಿ, ಪೇಟೆ ಕಾಲನಿ, ಸಂತೆಮೈದಾನ ಹಾಗೂ ಗಾಳಿಗಂಡಿಯ ಕೆಲವು ಮನೆಗಳಿಗೆ ನೀರು ನುಗ್ಗಿತು. ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದೊಳಗೆ ಕೊಳಚೆ ನೀರು ನುಗ್ಗಿದ ಪರಿಣಾಮ ಆಸ್ಪತ್ರೆಯ ಆವರಣ ಕಸ ಕಡ್ಡಿಗಳಿಂದ ತುಂಬಿತು.

ಈ ಕುರಿತು ಆಲ್ದೂರು ಸವಿತಾ ಸಮಾಜದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಮುಂಭಾಗದಿಂದ ಹರಿದುಬರುವ ನೀರು ಸರ್ಕಾರಿ ಆಸ್ಪತ್ರೆಗೆ ನುಗ್ಗುತ್ತದೆ. ಈ ರಸ್ತೆಯ ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ರಸ್ತೆಯಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಸಂಬಂಧಿಸಿದ ಇಲಾಖೆ ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ.

ಆಲ್ದೂರು ಗ್ರಾಪಂ ಉಪಾಧ್ಯಕ್ಷ ಎ.ಬಿ ಭರತ್ ಮಾತನಾಡಿ, ಪಟ್ಟಣದ ರಾಜ್ಯ ಹೆದ್ದಾರಿಗಳು ಲೋಕೋಪಯೋಗಿ ಇಲಾಖೆಗೆ ಸಂಭಂದಿಸಿದ್ದು, ಅವರು ನಿರ್ವಹಣೆಯನ್ನು ಸಂಪೂರ್ಣ ಕೈಬಿಟ್ಟಿದ್ದಾರೆ. ಪಟ್ಟಣದ ರಾಜ್ಯ ಹೆದ್ದಾರಿಗಳ ಚರಂಡಿಗಳನ್ನು ಸ್ವಚ್ಛಗೊಳಿಸಬೇಕಿದೆ. ಪಂಚಾಯಿತಿಯಲ್ಲಿ ಸ್ವಚ್ಛತೆಗೆ ಅನುದಾನದ ಕೊರತೆ ಇದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net