

ಹಾಸನ: ಯಾವುದೇ ಮನುಷ್ಯನಲ್ಲಿ ಅಹಂ ಬಂದರೆ ಅದೇ ಅಹಂ ಆತನನ್ನು ಪಾತಾಳಕ್ಕೆ ಎಳೆದುಕೊಂಡು ಹೋಗುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ನೂತನ ಅಧ್ಯಕ್ಷೆ ತನುಜಾ ಹೇಳಿದರು
ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನಲ್ಲಿ ಸೇವಾ ಮನೋಭಾವ ಇರಬೇಕು. ಯಾರೇ ಬಂದರೂ ಅವರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು ಎಂದು ಹೇಳಿದರು.
ತಾಳ್ಮೆಯನ್ನು ಮೈಗೂಡಿಸಿಕೊಂಡರೇ ಅದೇ ನಮ್ಮ ಮುಂದಿನ ದಾರಿ ತೋರಿಸುತ್ತದೆ ಎಂಬುದಕ್ಕೆ ಇಂದು ನಾನು ಈ ಕ್ಲಬ್ ಅಧ್ಯಕ್ಷರಾಗಿರುವುದೇ ಸಾಕ್ಷಿ. ನಾನು ಈ ಕ್ಲಬ್ ಸೇರಿದಾಗ ಮುಂದೊಂದು ದಿನ ನಾನು ಅಧ್ಯಕ್ಷ ಸ್ಥಾನಕ್ಕೆ ಬರುತ್ತೇನೆ ಅಂದುಕೊಂಡಿದ್ದೆ. ನನ್ನ ಆಶಯದಂತೆ ಈಗ ಈಡೇರಿದೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಯೋಜನೆಗಳೊಂದಿಗೆ ಜನರಿಗೆ ಸೇವೆ ಮಾಡುತ್ತೇನೆ. ಜನರಿಗೆ ನಮ್ಮಿಂದ ಆದಷ್ಟು ಒಳ್ಳೆಯ ಕೆಲಸ ಮಾಡುವ ಆಶಯ ಇಟ್ಟುಕೊಂಡಿದ್ದೇನೆ ಎಂದರು.
ಸಮಾಜ ಸೇವೆ ಮಾಡುವ ಮೂಲಕ ನಮ್ಮ ಇನ್ನರ್ ವೀಲ್ ಕ್ಲಬ್‌ಅನ್ನು ಎತ್ತರಕ್ಕೆ ಕೊಂಡೂಯ್ಯುವ ಗುರಿ ಹೊಂದಿದ್ದೇವೆ. ನಮ್ಮ ಈ ಉತ್ತಮ ಕೆಲಸಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರ ಅವಶ್ಯಕವಾಗಿದೆ. ನಾವು ಪ್ರೀತಿ, ವಿಶ್ವಾಸದಲ್ಲಿ ಸೇವೆಯೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಂಡರೇ ಅದು ತಾನಾಗಿಯೇ ಬಹು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತೇಜೋಧಯ ಅನಾಥಾಶ್ರಮ ನಡೆಸುತ್ತಿರುವ ರವಿತೇಜ ಅವರಿಗೆ ಒಂದು ಕ್ವಿಂಟಲ್ ಅಕ್ಕಿ, ಮೊಟ್ಟೆ ಹಾಗೂ ಧನ ಸಹಾಯ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೆಯೇ ಭರತನಾಟ್ಯ ಕಲಾವಿದೆಯನ್ನು ಸನ್ಮಾನಿಸಿದರು.
ಇದೆ ವೇಳೆ ಕ್ಲಬ್‌ನ ಜಿಲ್ಲಾ ಛೇರ‌್ಮನ್ ವೈಶಾಲಿ ವಿ. ಕೊಡ್ವಾ, ನಿರ್ಗಮಿತ ಅಧ್ಯಕ್ಷೆ ಡಿ.ಆರ್. ನಳಿನಿ, ಕಾರ್ಯದರ್ಶಿ ಎಂ.ವೈ.ವೇದಾ ಶಿವಕುಮಾರ್, ನೂತನ ಕಾರ್ಯದರ್ಶಿ ವನೀತಾ, ಜಿಲ್ಲಾ ಮಾಜಿ ಗೌರ‌್ನರ್ ಗೋವರ್ದನ್, ರಮೇಶ್, ಜಲಂಧರ್, ಸಂತೋಷ್, ಪ್ರದೀಪ್, ಮೋಹನ್, ಎಸ್‌ಡಿಎಂ ಕಾಲೇಜಿನ ಗುರು ಬಸವರಾಜು, ಪೂಜಾ ರಘುನಂದನ್, ಚಂದ್ರಿಕಾ ಮಹೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.