

ಚಾಮರಾಜನಗರ: ‘ಪುಣ್ಯಕೋಟಿ ಕಥೆಯಲ್ಲಿ ಹುಲಿಯ ಬಳಿ ಹಸು ಪ್ರಾಣ ಭಿಕ್ಷೆ ಕೇಳಿದಂತೆ ಹುಲಿ ಮನುಷ್ಯನ ಬಳಿ ಪ್ರಾಣ ಭಿಕ್ಷೆ ಕೇಳುವಂತಾಗಿದೆ. ಮನುಷ್ಯರ ಎದುರು ಹುಲಿಗಳೇ ಪುಣ್ಯಕೋಟಿಗಳಂತೆ ಕಾಣಿಸುತ್ತಿವೆ’.
ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ ಅವರ ಈ ಮಾತು ಅಕ್ಷರಶಃ ಸತ್ಯವಾಗುತ್ತಿದೆ. ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಮುಂದುವರಿದಿರುವ ಹುಲಿ ಹತ್ಯೆಯಿಂದಾಗಿ ವ್ಯಾಘ್ರಗಳ ಜೀವ ಅಪಾಯಕ್ಕೆ ಸಿಲುಕಿದೆ. ದ್ವೇಷ, ಪ್ರತೀಕಾರಕ್ಕಾಗಿ ಹುಲಿಗಳನ್ನು ಕೊಲ್ಲುವ ಕೃತ್ಯಗಳು ನಡೆಯುತ್ತಿವೆ. ಕೆಲವು ತಿಂಗಳ ಹಿಂದೆ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷಪ್ರಾಶನದಿಂದ ತಾಯಿ ಮತ್ತು ನಾಲ್ಕು ಮರಿ ಹುಲಿಗಳು ಮೃತಪಟ್ಟ ಘಟನೆ ಸಂರಕ್ಷಣೆಗೆ ದೊಡ್ಡ ಪೆಟ್ಟು ಕೊಟ್ಟಿತು. ಇದಾದ ಬಳಿಕ ಹನೂರು ಬರ್ ವಲಯದ ಪಚ್ಚೆದೊಡ್ಡಿಯಲ್ಲಿ ಹುಲಿಯನ್ನು ಮೂರು ತುಂಡು ಮಾಡಿ ಕೊಂದಿರುವುದು ಹತ್ಯಾಕಾಂಡವನ್ನು ಮುಂದುವರಿಸಿದೆ.
ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಹುಲಿಗಳಿರುವ ಜಿಲ್ಲೆ ಚಾಮರಾಜನಗರ. ಇಲ್ಲೇ ಹೀಗೆ ಹುಲಿಗಳನ್ನು ಕೊಲ್ಲುತ್ತಿರುವುದು ಕಳವಳ ಹುಟ್ಟು ಹಾಕಿದ್ದರೆ, ಮತ್ತೊಂದೆಡೆ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ವ್ಯಾಘ್ರಗಳ ಸಾವು ಹುಲಿಗಳ ಸಂತತಿಗೆ ಪೆಟ್ಟು ಕೊಡುತ್ತಿದೆ.