

ಶನಿವಾರಸಂತೆ: ಮನುಷ್ಯನ ವರ್ತನೆಯನ್ನು ಬದಲಾಯಿಸುವ ಹಿರಿಮೆ ಶಿಕ್ಷಣಕ್ಕಿದೆ ಎಂದು ಕೂಡಿಗೆ ಡಯೆಟ್ ಉಪನ್ಯಾಸಕ ಕೆ.ಎಸ್.ಶಿವಕುಮಾರ್ ಅಭಿಪ್ರಾಯಪಟ್ಟರು.
ಶನಿವಾರಸಂತೆ ಪ್ರಜ್ವಲ್ ಎಜುಕೇಷನ್ ಟ್ರಸ್ಟ್‌ನ ಕಾವೇರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣವು ಅಜ್ಞಾನದಿಂದ ಸುಜ್ಞಾನದತ್ತ ಕೊಂಡೊಯ್ಯುತ್ತದೆ. ಮನುಷ್ಯನ ವರ್ತನೆಯನ್ನು ಬದಲಾಯಿಸುವ ಮಾರ್ಗೋಪಾಯವು ನಿಜವಾದ ಶಿಕ್ಷಣ. ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಮಾಡಬೇಕಾದರೆ ಶ್ರಮ ಪಡಬೇಕಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್‌ನಲ್ಲೇ ಹೆಚ್ಚು ಕಾಲಾಹರಣ ಮಾಡುತ್ತಿದ್ದಾರೆ. ಪಾಲಕರು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರ ಮಾಡುವಂತೆ ಸಲಹೆ ನೀಡಿದರು.
ಸೋಮವಾರಪೇಟೆ ಕ್ಷೇತ್ರ ಶಿಕ್ಷಣ ಸಂಯೋಜನಾಧಿಕಾರಿ ಎಚ್.ಆರ್.ಶೇಖರ್ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಕೇವಲ ಡಾಕ್ಟರ್, ಇಂಜಿನಿಯರ್ ಮಾಡಬೇಕೆಂಬ ನಿರೀಕ್ಷೆ ಇಟ್ಟುಕೊಂಡು ಶಿಕ್ಷಣ ಕೊಡಿಸಬಾರದು. ಇದರ ಬದಲಿಗೆ ವಿದ್ಯಾವಂತನಾಗಬೇಕೆಂಬ ಉದ್ದೇಶದಿಂದ ಶಿಕ್ಷಣ ಕೊಡಿಸಬೇಕು ಎಂದರು.
ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಪಿ.ಗುಂಡಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಎಂ.ಹೂವಯ್ಯ, ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಕಿರಣ್, ವಿದ್ಯಾಸಂಸ್ಥೆ ಪ್ರಾಂಶುಪಾಲ ಎಚ್.ಎನ್.ದೇವರಾಜ್, ಮುಖಂಡ ಎಸ್.ಕೆ.ರಾಜಶೇಖರ್, ಕಾವೇರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಶ್ವಥ್, ಗೌಡಳ್ಳಿ ವೃತ್ತ ಗ್ರಾಮ ಲೆಕ್ಕಿಗ ಅಬ್ದುಲ್ ರಜಾಕ್, ಗೌಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ತಾಯಮ್ಮ, ವಿದ್ಯಾಸಂಸ್ಥೆ ನಿರ್ದೇಶಕರಾದ ಎಲ್.ಖಾನಾರಾಮ್, ಪ್ರೀತಿ ದೇವರಾಜ್, ಶಿಕ್ಷಕ ವಿಶ್ವನಾಥ್ ಇದ್ದರು.