

ವಿರಾಜಪೇಟೆ: ವಿದ್ಯಾಭ್ಯಾಸ ಎಂದರೆ ಓದುವುದು ಮಾತ್ರವಲ್ಲ ಅದು ಮನುಷ್ಯನ ಜೀವನ ಹಾಗೂ ಚಾರಿತ್ರೃವನ್ನು ವೃದ್ಧಿಗೊಳಿಸುತ್ತಿದೆ ಎಂದು ಮಗ್ಗುಲದ ಲಿಟಲ್ ಸ್ಕೂಲರ್ಸ್ ಅಕಾಡೆಮಿಯ ಅಧ್ಯಕ್ಷೆ ಪೂಜಾ ರವಿಂದ್ರನ್ ಹೇಳಿದರು.
ವಿರಾಜಪೇಟೆಯ ಸೆರೆನಿಟಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಉತ್ತಮವಾಗಿದ್ದು, ಎಲ್ಲ ವರ್ಗದ ವಿದ್ಯಾಥಿಗಳಿಗೆ ಏಕರೂಪ ಶಿಕ್ಷಣ ಲಭಿಸಿದರೆ ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗುವುದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನ ಸಾಮಾನ್ಯ ಬದುಕಿಗೆ ಶಿಕ್ಷಣ ಅತ್ಯಗತ್ಯ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡುವುದರ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಳ್ಳುವಂತಾಗಬೇಕು ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಪೂಣಚ್ಚ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ 55 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಿಬಿಎಸ್‌ಸಿ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಹಬ್ಬ ಹರಿದಿನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರೀಯ ಹಬ್ಬ ಸೇರಿದಂತೆ ಇತರ ಹಬ್ಬಗಳ ಮಹತ್ವವನ್ನು ತಿಳಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
ವಿರಾಜಪೇಟೆ ನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಗೀತಾ ಮಾತನಾಡಿ, ಮಹಿಳೆ ಅಬಲೆ ಅಲ್ಲ, ಸಬಲೆ ಎನ್ನುವುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದು ಪುರುಷರಿಗೆ ಸರಿ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಸಮಾಜ ಮುಂದುವರಿದಂತೆ ಮಹಿಳೆಯರೂ ಕೂಡ ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ ಎಂದರು.
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹೆಡ್ ಕಾನ್‌ಸ್ಟೇಬಲ್ ಗೀತಾ, ಕುಟ್ಟಂದಿ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಎಂ.ಎಸ್. ರಮಿತಾ, ಮಗ್ಗುಲ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಐ.ಬಿ. ರಿಹಾನ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಪ್ರತಿಮಾ ರಂಜನ್, ಗೋಲ್ಡನ್ ರಾಕ್ಸ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಸಜೇಶ್ ಭರತನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಅಂಗವಾಗಿ ಕಂಸಾಳೆ, ಡೊಳ್ಳುಕುಣಿತ, ವೀರಾಗಾಸೆಯನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.