ಮನುಷ್ಯನ ಧ್ವೇಷದ ದಳ್ಳುರಿಗೆ ವಚನದಲ್ಲಿದೆ ಪರಿಹಾರ : ಸಂಸ್ಕೃತಿ ಚಿಂತಕ ಶಂಕರ್ ದೇವನೂರು

Jss 1
Published on

ಮೈಸೂರು: ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿದ್ದು, ಆ ಮೂಲಕ ಜಗತ್ತು ಪ್ರಗತಿಯತ್ತ ದಾಪುಗಾಲು ಇಡುತ್ತಿದೆ. ಆದರೆ, ಮನುಷ್ಯನ ಮನಸ್ಸು ಮಾತ್ರ ಜಡವಾಗಿದೆ. ಹಾಗಾಗಿ ನಿಜವಾಗಿಯೂ ಮನುಷ್ಯನಲ್ಲಿ ಮಾನವೀಯ ಕಾರುಣ್ಯ ಪ್ರಗತಿ ಕಾಣುವ ಅವಶ್ಯಕತೆ ಇದೆ ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಅಭಿಪ್ರಾಯಪಟ್ಟರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಅನುಭವ ಮಂಟಪದ ಅನುಭಾವ ಗೋಷ್ಠಿ’ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಯಂತ್ರಗಳ ಅಭಿವೃದ್ಧಿಗೆ ಒತ್ತು ನೀಡುವ ಬದಲು ನಮ್ಮ ಜಡ ಮನಸ್ಸುಗಳಿಗೆ ಜೀವಂತಿಕೆ ತುಂಬ ಕಾರ್ಯ ಆಗಬೇಕು ಎಂದು ಹೇಳಿದರು.

ಆಧುನಿಕತೆ ಅಬ್ಬರದಿಂದ ಬಹುತೇಕರು ನೆಮ್ಮದಿ ಕಳೆದುಕೊಂಡಿದ್ದಾರೆ. ಈ ಬೇಗುದಿಗೆ ಮುಖ್ಯಕಾರಣ ನಮ್ಮ ನುಡಿ ಮತ್ತು ಚಾರಿತ್ರ್ಯಕ್ಕೆ ನಾವು ತಂದುಕೊಂಡ ದಾರಿದ್ರೃ. ಪ್ರಸ್ತುತ ಕುಲ, ಮತ, ಹಣ, ಅಧಿಕಾರ, ಸ್ವ ಪ್ರತಿಷ್ಠೆ, ವಿಶ್ವಾಸದ್ರೋಹ, ಅಪನಂಬಿಕೆಯ ಪರಿಣಾಮ ಮಾನವೀಯ ಮೌಲ್ಯಗಳು ದೂರವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಮನುಷ್ಯ ತನ್ನ ಸುತ್ತ ತಾನೇ ಪಂಜರಗಳನ್ನು ಹೆಣೆದುಕೊಂಡು ಧ್ವೇಷದ ದಳ್ಳುರಿಯಲ್ಲಿ ದಹನವಾಗುತ್ತಿರುವುದು ದುರಂತ. ಈ ದಳ್ಳುರಿಗೆ ವನಚಗಳಲ್ಲಿ ಪರಿಹಾರವಿದೆ. ಜೀವನ ಹೇಗೆ ಸಾಬೇಕು ಎಂಬ ಕುರಿತು ವಚನಗಳು ಮಾರ್ಗದರ್ಶನ ಮಾಡುತ್ತವೆ. ವಚನಗಳಲ್ಲಿ ನಮ್ಮ ಬದುಕಿಗೆ ಬೇಕಾದ ಎಲ್ಲ ಅಂಶಗಳು ಇದ್ದು, ತೆರೆದು ನೋಡುವ ಕಾರ್ಯ ಮಾಡಬೇಕು ಎಂದು ಹೇಳಿದರು.

12ನೇ ಶತಮಾನದ ಶರಣರ ಚಿಂತನೆ, ತತ್ವಗಳು ಅತ್ಯಂತ ಮಾನವೀಯ ಮತ್ತು ಪವಿತ್ರವಾಗಿದೆ. 12ನೇ ಶತಮಾನ ಜಗತ್ತು ಕಂಡ ಅತ್ಯಂತ ಬೌದ್ಧಿಕ ಕಾಲಘಟ್ಟ. ಮಾನವ ಶಕ್ತಿಯ ಪೂರ್ಣ ವಿಕಾಸಕ್ಕೆ ಕಾರಣವಾಗುವ ಮಾರ್ಗವನ್ನು ಬಸವವಾದಿ ಶರಣ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಸಾಹಿತಿ ಓ.ಎಲ್.ನಾಗಭೂಷಣ ಸ್ವಾಮಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಡಾ.ಕವಿತಾ.ರೈ, ಸಹಾಯಕ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್, ತೆರಕಣಾಂಬಿ ಕಾಲೇಜಿನ ಅತಿಥಿ ಉಪನ್ಯಾಸಕ ದಿಲೀಪ್ ಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ, ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ದತ್ತಿ ದಾನಿ ಪ್ರೊ.ಡಿ.ಎಸ್. ಸದಾಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net