ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ ಕನ್ನಡ ಭಾಷೆ

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವದ ಮಾಸಾಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿದರು. ನಾಗರಾಜು ಕೊಂಗರಹಳ್ಳಿ, ಡಾ.ಮಧುಸೂದನ್, ಬಿ.ಕೆ.ಪ್ರಕಾಶ್, ಪುಟ್ಟಶೆಟ್ಟಿ ಇತರರಿದ್ದರು.
27kglphoto5.
Published on

ಕೊಳ್ಳೇಗಾಲ: ಭಾರತದ ಪ್ರಾಚೀನ ಭಾಷೆಯಾಗಿರುವ ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯಲಾಗಿದ್ದು, ಕನ್ನಡ ಭಾಷೆ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ತಿಳಿಸಿದರು.


ಪಟ್ಟಣದ ವಾಸವಿ ಪ್ರೌಢಶಾಲೆಯಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದೆಡೆ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಸಂವಹನ ಮಾಡುವವರು ಸಂಖ್ಯೆ ಕ್ಷೀಣಿಸುತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲು ಟೊಂಕಕಟ್ಟಿ ನಿಂತಿದೆ. ಯಾವುದೇ ಭಾಷೆಯು ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಸಾವಿರಾರು ವರ್ಷಗಳ ಬಹುತ್ವದ ಭಾರತವನ್ನು ನಾಶ ಮಾಡಿ ಏಕತ್ವದ ಸಂಸ್ಕೃತಿ ಸ್ಥಾಪಿಸಲು ಹೊರಟಂತಿದೆ, ಇದು ಅಪಾಯಕಾರಿ ಬೆಳವಣಿಗೆ ಎಂದರು.


ಸಣ್ಣ ಸಣ್ಣ ಭಾಷೆಗಳೂ, ಸಂಸ್ಕೃತಿಯೂ ಈ ದೇಶವಾಸಿಗಳ ಧಮನಿ ಧಮನಿಯಲ್ಲಿ, ಉಸಿರುಸಿರಿನಲ್ಲಿ ಬೆರೆತು ಹೋಗಿರುವಾಗ ಅದನ್ನು ಬೇರ್ಪಡಿಸುವ ಹುನ್ನಾರ ಹಿಂಸೆ ಎನಿಸದಿರದು ಎಂದು ಅಭಿಪ್ರಾಯಪಟ್ಟರು.

ಕನ್ನಡ ನಮ್ಮೆಲ್ಲರ ಹೆಮ್ಮೆಯ ಭಾಷೆ. ಕನ್ನಡವನ್ನು ಸಂವರ್ಧಿಸಲು ಅನ್ಯ ಮಾರ್ಗಗಳಿಲ್ಲ, ಬಳಸಿಯೆ ಕನ್ನಡ ಭಾಷೆಯನ್ನು ಬೆಳಸಬೇಕು. ಈ ಮಣ್ಣಿನ ಋಣ ತೀರಿಸಲು ನಮ್ಮ ಹಿರಿಯರು ಪರಿಶ್ರಮದಿಂದ ಕಾಪಾಡಿಕೊಂಡು ಬಂದ ಕನ್ನಡವನ್ನು ಉಳಿಸಲು ಬೆಳೆಸಲು ನಾವೆಲ್ಲರು ನಿತ್ಯ ನಿರಂತರವಾಗಿ ಪ್ರಯತ್ನಿಸೋಣ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ ಮಾತನಾಡಿ, ಕಸಾಪ ಕನ್ನಡಿಗರ ಹೆಮ್ಮೆಯ ಸಂಸ್ಥೆ. ಸಾಹಿತ್ಯ, ಸಂಸ್ಕೃತಿ, ನೆಲ, ಜಲ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಕನ್ನಡ ಪರ ಚಟುವಟಿಕೆಯನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು, ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ವೈದ್ಯರಾದ ಮಧುಸೂದನ್, ಆರ್ಯ ವೈಶ್ಯ ಸಂಘದ ಜಿಲ್ಲಾಧ್ಯಕ್ಷ ಬಿ.ಕೆ. ಪ್ರಕಾಶ್, ರೋಟರಿ ಸಂಸ್ಥೆಯ ಸದಸ್ಯ ಪುಟ್ಟಶೆಟ್ಟಿ, ಸಾಹಿತ್ಯ ಪರಿಷತ್ತಿನ ನಿರ್ದೇಶಕ ಇಂದ್ರಕುಮಾರ್ ಹಾಗೂ ಶಿಕ್ಷಕ ವೃಂದ ಹಾಜರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net