

ಚನ್ನರಾಯಪಟ್ಟಣ: ಮನುಷ್ಯ, ಮನುಷ್ಯನಾಗಬೇಕಾದ್ರೆ ಸಾಹಿತ್ಯ ಮುಖ್ಯವೆಂದು ರಂಗಭೂಮಿ ಕಲಾವಿದ, ಚಲನಚಿತ್ರ ನಟ ನೀನಾಸಂ ಅಶ್ವಥ್ ಅಭಿಪ್ರಾಯಿಸಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕವಿಗೋಷ್ಠಿಯಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಹುಟ್ಟಿದ ಮನುಷ್ಯ ಬದುಕಿನಲ್ಲಿ ಪರಿಪೂರ್ಣತೆ ಸಾಧಿಸಲು ಸಾಹಿತ್ಯ ಅತ್ಯವಶ್ಯಕ, ಮಕ್ಕಳಿದ್ದಾಗಲೇ ಕಲೆ, ಸಾಹಿತ್ಯದ ಕಡೆಗೆ ಆಕರ್ಷಿಸುವ ಕೆಲಸವನ್ನು ಶಿಕ್ಷಕರು, ಪೋಷಕರು ಮಾಡಬೇಕೆಂದರು.
ನಾಡಿನ ನಾನಾ ಸಾಹಿತ್ಯ ಪಂಥಗಳ ನಡುವೆ ಮಕ್ಕಳ ಸಾಹಿತ್ಯವನ್ನು ಬೆಳೆಸುವ ಕೆಲಸವನ್ನು ಮಕ್ಕಳ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ರಾಜ್ಯದಲ್ಲೆ ಮಕ್ಕಳ ಸಾಹಿತ್ಯ ಪರಿಷತ್ತು ಎಂಬ ಕಲ್ಪನೆ ಹುಟ್ಟುಹಾಕಿರುವ ಇಲ್ಲಿನ ಶ್ರೇಷ್ಠ ಮನಸ್ಸುಗಳಿಗೆ ನೂರು ನಮನ, ಕತೆ, ಕವನ ಕಟ್ಟುವ ಕೆಲಸವನ್ನು ಮಕ್ಕಳಲ್ಲಿ ತುಂಬಿ ಆದನ್ನು ಪೋಷಿಸುವ ಕೆಲಸ ಮಾಡುವ ಇಂತಹ ಕಾರ್ಯಕ್ರಮಗಳು ನಾಡಿಗೆ ಅಪರೂಪವಾದದ್ದು, ಮಕ್ಕಳ ಸಾಹಿತ್ಯ ಪರಿಷತ್ತಿನ ಕೆಲಸ ನಿತ್ಯ, ನಿರಂತರವಾಗಿರಲಿ ಎಂದರು.
ಸಮ್ಮೇಳನದ ಸಹ ಅಧ್ಯಕ್ಷೆ ಕವಿಗೋಷ್ಠಿಯ ಅಧ್ಯಕ್ಷೆ, ಶಾಲಿನಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿನಿ ರಕ್ಷಿತಾ ಮಾತನಾಡಿ ಕಿವಿಗೆ ಇಂಪಾದ ಭಾಷೆ ಕನ್ನಡ, ಕನ್ನಡಮ್ಮನ ಮಕ್ಕಳಾಗಿ ಹುಟ್ಟಿರುವ ನಾವು ಧನ್ಯರು, ಇಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ನೂರಾರು ಕವಿಗಳು ಸಾವಿರಾರು ಕವಿತೆ, ಕವನ, ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ಓದಿ ಆರಾಧಿಸುವ ಕೆಲಸ ನಮ್ಮದಾಗಬೇಕು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಆಧುನಿಕ ಕವಿ ಕುವೆಂಪುರವರು ಸೇರಿ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೇಷ್ಠ ಭಾಷೆ ಕನ್ನಡವೆಂದರು.
ತಾಲೂಕಿನ ನಾನಾ ಶಾಲೆಗಳ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ರಚಿಸಿದ ಕವಿತೆ, ಕವನಗಳನ್ನು ಕವಿಗೋಷ್ಠಿಯಲ್ಲಿ ವಾಚಿಸಿದರು.
ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಜಿ.ಪಂ.ಮಾಜಿ ಸದಸ್ಯೆ ಕುಸುಮಾಬಾಲಕೃಷ್ಣ, ಪು.ಸದಸ್ಯ ಸಿ.ಎನ್.ಶಶಿಧರ್, ವೈದ್ಯ, ಡಾ.ನಾಗೇಶ್, ನವೋದಯ ಸಂಸ್ಥೆ ಅಧ್ಯಕ್ಷ ಆದಿಶೇಷಕುಮಾರ್, ಕಾರ್ಯದರ್ಶಿ ನವೀನ್, ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಪ್ರ.ಕಾರ್ಯದರ್ಶಿ ನಟೇಶ್, ಶಿವಮೊಗ್ಗ ಜಿಲ್ಲಾಧ್ಯಕ್ಷ ರವಿರಾಜ್‌ಸಾಗರ್, ಬಳ್ಳಾರಿಯ ಪ್ರಸನ್ನ ದೇವಮಠ್, ಚಿಕ್ಕಮಗಳೂರು ಜಿಲ್ಲೆಯ ಮಲ್ಲಿಗೆ ಸುಧೀರ್, ದಾವಣಗೆರೆ ಜಿಲ್ಲಾಧ್ಯಕ್ಷ ಡಾ.ಪ್ರಾನ್ಸಿಸ್ ಸೇರಿ ಇತರರು ಇದ್ದರು.