

ಕೊಡಗು : ಆಧುನಿಕ ಜೀವನ ಪದ್ಧತಿಯಿಂದಾಗಿ ಮಾನವೀಯ ವೌಲ್ಯಗಳು ಕುಸಿಯುತ್ತಿರುವ ಈ ಹೊತ್ತಿನಲ್ಲಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯ ವೌಲ್ಯಗಳು ಮನುಷ್ಯನ ಉತ್ತಮ ಜೀವನಕ್ಕೆ ಕಿರೀಟಪ್ರಾಯ ಎಂದು ಜಿಲ್ಲಾ ಕಾರ್ಮಿಕ ಅಕಾರಿ ಎಸ್.ಎಲ್. ಹರ್ಷವರ್ಧನ್ ಹೇಳಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಮಡಿಕೇರಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ವಚನಗಳ ನಡಿಗೆ ಶಾಲಾ-ಕಾಲೇಜುಗಳೆಡೆಗೆ ಚಿಂತನಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತಾಗಿರುವ ವಚನಗಳನ್ನು ವಿದ್ಯಾರ್ಥಿಗಳು ಶಾಲಾ, ಕಾಲೇಜು ಹಂತದಲ್ಲಿಯೇ ಅರಿಯಬೇಕು. ವಚನಗಳ ಸಾರದಂತೆ ನಡವಳಿಕೆ ರೂಪಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅದು ಇಡೀ ಬದುಕಿಗೆ ವರವಾಗುತ್ತದೆ. ಹಾಗಾಗಿ 900 ವರ್ಷಗಳು ಕಳೆದರೂ ಸರ್ವ ಶ್ರೇಷ್ಠ ಹಾಗೂ ಸರ್ವವ್ಯಾಪಿಯಾದ ವಚನ ಸಾಹಿತ್ಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದರು.
ವಚನ ಸಾಹಿತ್ಯದ ವೌಲ್ಯಗಳ ಕುರಿತು ಪ್ರವಚನ ನೀಡಿದ ಕುಶಾಲನಗರ ತಾಲೂಕು ಬಸವನಹಳ್ಳಿ ಮುರಾರ್ಜಿ ದೇಸಾಯಿ ಪಿಯು ಕಾಲೇಜು ಕನ್ನಡ ಉಪನ್ಯಾಸಕ ಶಿವಕುಮಾರ್, ಬಸವಣ್ಣನ ವಚನಗಳು ಸಾರ್ವಕಾಲಿಕವಾದ ವೌಲ್ಯಗಳೊಂದಿಗೆ ಮನುಷ್ಯನನ್ನು ಪರಿಶುದ್ಧತೆಯತ್ತ ಕೊಂಡೊಯ್ಯುತ್ತವೆ. ವಚನಗಳ ಅರಿವು ಮನುಷ್ಯನ ಅಂತರಂಗವನ್ನು ಶುದ್ಧ ಮಾಡುತ್ತವೆ. ಹಾಗಾಗಿ ವಿದ್ಯಾರ್ಥಿಗಳು ವಚನ ಸಾಹಿತ್ಯದ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಮಾತಮಾಡಿದರು. ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಕೆ.ಬಿ.ಗೌರಿ, ರಾಜಸುಂದರಂ, ಚನ್ನಬಸಪ್ಪ ಇದ್ದರು. ವಿದ್ಯಾರ್ಥಿಗಳಾದ ಅಫೀಾ, ಪ್ರಿಯದರ್ಶಿನಿ, ತನಿಷಾ, ಹೇಮಾವತಿ ವಚನ ಗಾಯನ ನಡೆಸಿಕೊಟ್ಟರು.