ಮನುಷ್ಯ ಜನ್ಮವನ್ನು ಸರಿಯಾಗಿ ಬಳಸಿಕೊಳ್ಳಿ, ಜಗದ್ಗುರು ಶ್ರೀ ಪ್ರವಾನಂದಪುರಿ ಸ್ವಾಮೀಜಿ ಸಲಹೆ. ಆದಿಶಕ್ತಿ ಜನಜಾಗೃತಿ ಯಾತ್ರೆಯ ವಿಜಯೋತ್ಸವ

02-Manjunath-HSK-03
Published on

ಹೊಸಕೋಟೆ: ಮನುಷ್ಯ ಜನ್ಮವನ್ನು ಸರಿಯಾಗಿ ಉಪಯೋಗಿಸಿಕೊಂಡು ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಶಿವನಾಪುರದ ಆದಿಶಕ್ತಿ ಮಹಾಸಂಸ್ಥಾನ ವಹ್ನಿಕುಲ ಕ್ಷತ್ರಿಯ ಗುರುಪೀಠದ ಜಗದ್ಗುರು ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

ನಗರದ ಎಸ್‌ಜೆಆರ್‌ಎಸ್ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿದ್ದ ಆದಿಶಕ್ತಿ ಜನಜಾಗೃತಿ ಯಾತ್ರೆಯ ವಿಜಯೋತ್ಸವದಲ್ಲಿ ಮಾತನಾಡಿದರು.

ತಾಲೂಕು ಹಾಗೂ ಇತರೆ ಜಿಲ್ಲೆಗಳಲ್ಲಿ ನಡೆದ ಜನಜಾಗೃತಿ ಅಭಿಯಾನ ಯಶಸ್ವಿಯಾಗಿದೆ. ತಿಗಳ ಜನಾಂಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಹರ್ಷ ವ್ಯಕ್ತಪಡಿಸಿದರು.

ಗುರುವಿನ ಜ್ಞಾನದಿಂದ ಜನರಿಗೆ ಶಕ್ತಿಯು ಸಿಗುತ್ತದೆ. ಜನರಿಗೆ ಜ್ಞಾನವೇ ಮುಖ್ಯ. ಜ್ಞಾನ ಸಂಪಾದನೆಗಾಗಿ ಎಲ್ಲರೂ ಗುರಿವಿನ ಮೊರೆ ಹೋಗಬೇಕು. ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಅದು ನಿಶ್ಚಿತ. ಆದರೆ ಸಾಯುವ ಮುನ್ನ ಒಳ್ಳೆಯ ಕೆಲಸ ಮಾಡಬೇಕು ಎಂದು ತಿಳಿಸಿದರು.

ಬೆಂಕಿಯಿಂದ ಹುಟ್ಟಿದ ಆದಿಶಕ್ತಿಯ ಆರಾಧಕರು ನಾವು. ಮುಂಚಿನ ಕಾಲದಲ್ಲಿ ನಮಗೆ ತೋಳ್ಬಲ ಬೇಕಾಗಿತ್ತು. ಆದರೆ ಈಗಿನ ತಂತ್ರಜ್ಞಾನದ ಯುಗದಲ್ಲಿ ಜ್ಞಾನ ಮತ್ತು ಯುಕ್ತಿಯಿಂದ ಶಕ್ತಿ ಲಭಿಸುತ್ತದೆ ಅಂತಹ ಯುಕ್ತಿಯನ್ನು ತಿಗಳ ಜನಾಂಗದವರು ಸಂಪಾದಿಸಬೇಕಾಗಿದೆ ಎಂದು ಹೇಳಿದರು.

ತಿಗಳ ಸಮಾಜದ ಅಧ್ಯಕ್ಷ ಸಿ. ಜಯರಾಜ್ ಮಾತನಾಡಿದ, ನಮ್ಮ ಬಹಳ ದಿನಗಳ ಬೇಡಿಕೆಯಾಗಿದ್ದ ಗುರುಪೀಠ ಮತ್ತು ಸಮಾಜಕ್ಕೆ ಒಬ್ಬ ಗುರುವಿನ ಅವಶ್ಯಕತೆಯು ಈಗ ಪೂರ್ಣಗೊಂಡಿದೆ. ಎಲ್ಲರೂ ಮಠಕ್ಕೆ ಭೇಟಿ ಕೊಟ್ಟು ಸ್ವಾಮೀಜಿ ಅವರ ಆಶೀರ್ವಾದ ಪಡೆಯಬೇಕು ಎಂದರು.

ತಾಲೂಕು ತಿಗಳ ಸಂಘದ ಅಧ್ಯಕ್ಷ ಸಿ. ಮುನಿಯಪ್ಪ ಮಾತನಾಡಿ, ಮೂರು ವರ್ಷಗಳ ಹಿಂದೆ ಸ್ಥಾಪಿತವಾದ ಮಠದಿಂದ ತಿಗಳ ಜನಾಂಗದವರನ್ನು ಒಟ್ಟು ಮಾಡುವ ಪ್ರಯತ್ನವಾಗಿ ಸ್ವಾಮೀಜಿ ನೇತೃತ್ವದಲ್ಲಿ ನಡೆಸಿದ ಆದಿಶಕ್ತಿ ಜನ ಜಾಗೃತಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಅರುಣ್ ಕುಮಾರ್, ಮುಖಂಡರಾದ ಲಕ್ಷ್ಮಣ್, ಬಾಲಚಂದ್ರ ಮತ್ತಿತರರು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸ್ವಾಮೀಜಿ ಅವರ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಯಿತು. ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು, ಮುಖಂಡರಾದ ಎಚ್.ಜೆ. ರವೀಂದ್ರ, ಮೋಹನ್, ಶಂಕರ್, ಉಮೇಶ್, ಹೇಮಂತ್ ಕುಮಾರ್, ಉಮೇಶ್ ಮತ್ತಿತರರಿದ್ದರು.

ಶ್ರೀ ದ್ರೌಪದಿ ದೇವಿಯ ಕರಗ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸಕೋಟೆಯಲ್ಲಿ ನಡೆದಿತ್ತು ಎನ್ನುತ್ತಾರೆ ಹಿರಿಯರು. ಈಗ ರಾಜ್ಯದಲ್ಲಿ ತಿಗಳ ಜನಾಂಗದ ಮೊದಲ ಗುರುಪೀಠ ಹೊಸಕೋಟೆಯಲ್ಲಿ ಪ್ರಾರಂಭವಾಗಿದೆ. ಜನಾಂಗದ ಅಭಿವೃದ್ಧಿಗೆ ಶ್ರಮಿಸಲು ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಕೊಡುವ ಸಲಹೆ, ಸೂಚನೆಗಳನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಪಾಲಿಸಬೇಕು. ವಿಜಯ್ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net