

ತುಮಕೂರು: ದೇವರನ್ನು ನಂಬದ ನಾಸ್ತಿಕರೂ ಇದ್ದಾರೆ. ನಂಬಿ ಪೂಜಿಸುವ ಆಸ್ತಿಕರೂ ಇದ್ದಾರೆ. ಆದರೆ, ನಾಸ್ತಿಕರು ಕೊನೇ ಹಂತದಲ್ಲಿ ದೇವರಿಗೆ ಶರಣಾದ ಉದಾಹರಣೆಗಳಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ನಗರದ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಧನುಮಾರ್ಸದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ನಂತರ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ದೇವರು, ಧರ್ಮ, ಗುರುಗಳ ಬಗ್ಗೆ ಯಾರು ಯಾವ
ರೀತಿಯ ಭಾವನೆ ಇಟ್ಟುಕೊಂಡಿದ್ದಾರೆ ಎಂದು ಹೇಳಬೇಕಾಗಿಲ್ಲ. ಅದು ಅವರವರಿಗೆ ಬಿಟ್ಟಿದ್ದು ಎಂದರು. ದೇವರು ಎಲ್ಲೆಡೆ ಇದ್ದಾನೆ. ಮನುಷ್ಯನ ಅಂತರಂಗಲ್ಲಿ ದೇವರು ಸದಾ ತುಂಬಿರುತ್ತಾನೆ. ಅದು ನಮ್ಮ ಬರಿಗಣ್ಣಿಗೆ ಕಾಣುವುದಿಲ್ಲ. ಎಳ್ಳಿನಲ್ಲಿ ಎಣ್ಣೆ ಇದ್ದರೂ ಕಾಣುವುದಿಲ್ಲ, ಅದನ್ನು ಹುರಿದು, ಅರೆದು, ಹಿಂಡಿದಾಗ ಮಾತ್ರ ಎಣ್ಣೆ ಬರುತ್ತದೆ. ದೇವರೂ ಹಾಗೆಯೇ ಎಳ್ಳಿನ ಒಳಗಿರುವ ಎಣ್ಣೆಯಂತೆ. ಹಾಲಿನಲ್ಲಿ ನಮಗೆ ಕಾಣದಂತಿರುವ ತುಪ್ಪ ಇದ್ದಂತೆ. ಧನುಮಾರ್ಸದ ಸಂದರ್ಭದಲ್ಲಿ ಪ್ರಾತ@ಕಾಲ ಒಂದೆರಡು ಗಂಟೆ ಕಾಲ ಪೂಜೆ ಮಾಡಿದರೆ ಆರೋಗ್ಯ, ನೆಮ್ಮದಿ ಉಳಿಯುತ್ತದೆ. ಸಮಸ್ಯೆ ತಾಳಿಕೊಳ್ಳುವ ಆತ್ಮಬಲ ಹೆಚ್ಚಾಗುತ್ತದೆ. ಎಷ್ಟೇ ಸಂಪತ್ತುಗಳಿಸಿದರೂ ಕೊನೆಗೆ ಅದು ಮನುಷ್ಯನ ಜತೆ ಬರುವುದಿಲ್ಲ. ಜತೆ ಬರುವುದು ಇಷ್ಟಲಿಂಗ ಮಾತ್ರವೇ ಎಂದರು.
ತುಮಕೂರಿನ ಭವ್ಯವಾದ ಜಗದ್ಗುರು ರೇಣುಕಾ ಮಂದಿರ ನಿಮಾರ್ಣವಾಗುತ್ತಿದೆ. ಕೊನೇ ಹಂತದ ಕೆಲಸ ಬಾಕಿ ಇದೆ. ಭಕ್ತರು ತಮ್ಮ ಭಕ್ತಿ, ಶಕ್ತಿ ಅನುಸಾರ ಮಂದಿರ ನಿಮಾರ್ಣ ಕಾರ್ಯಕ್ಕೆ ನೆರವಾಗಬೇಕು ಎಂದು ಹೇಳಿದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ
ಸ್ವಾಮೀಜಿ ನೇತೃತ್ವವಹಿಸಿದ್ದರು. ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉಪಾಧ್ಯಕ್ಷ
ಎಚ್.ಆರ್.ನಾಗೇಶ್, ನಿರ್ದೇಶಕರಾದ ಟಿ.ಎಸ್.ನಳಿನಾ, ಟಿ.ಬಿ.ಮೃತ್ಯುಂಜಯ, ಎಚ್.ಎನ್.ಶಿವಕುಮಾರ್, ಪ್ರಭಾಕರ್, ಕೆ.ಎಸ್.ಸುರೇಶ್, ಅರುಣ್ಕುಮಾರ್, ಟಿ.ಎಸ್.ಪೃಥ್ವಿಪ್ರಸಾದ್, ಟಿ.ಶಾಂತಕುಮಾರಿ, ಟಿ.ಎಸ್.ಲೋಕೇಶ್ಕುಮಾರ್, ಟಿ.ಎಸ್.ಚಿದಾನಂದ್, ಡಾ.ಡಿ.ಎಸ್.ಸುರೇಶ್, ಟಿ.ಎಸ್.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.