ಮನುಕುಲ ಕಲ್ಯಾಣವೇ ಧರ್ಮಗಳ ಧ್ಯೇಯ

oplus_131074
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಚಿಟಗುಪ್ಪದಲ್ಲಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಶ್ರೀ ಗುರುಲಿಂಗ ಶಿವಾಚಾರ್ಯ, ಶ್ರೀ ರಾಜೇಶ್ವರ ಶಿವಾಚಾರ್ಯ, ಮಾಜಿ ಶಾಸಕ ಸುಭಾಷ ಕಲ್ಲೂರ,    ಸೋಮನಾಥ ಪಾಟೀಲ್ ಇತರರಿದ್ದರು.
Published on

ಚಿಟಗುಪ್ಪ: ಎಲ್ಲ ಧರ್ಮಗಳ ಮುಖ್ಯ ಉದ್ದೇಶವೇ ಮಾನವನ ಜೀವನಕ್ಕೆ ಬೆಳಕು ನೀಡುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ದೇವಸ್ಥಾನದ ನೂತನ ರಥದ ಲೋಕಾರ್ಪಣೆ ನಿಮಿತ್ತ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಭಾರತದಲ್ಲಿ ಇರುವಷ್ಟು ಧರ್ಮಗಳು ಬೇರೆಲ್ಲೂ ಕಾಣಸಿಗುವುದಿಲ್ಲ. ಆಯಾ ಧರ್ಮಾಚರಣೆ ಬೇರೆ ಬೇರೆಯಾದರೂ ಧ್ಯೇಯ ಮಾತ್ರ ಮನುಕುಲ ಕಲ್ಯಾಣ. ಪ್ರತಿಯೊಬ್ಬರೂ ಸುಖ, ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದದಿಂದ ಬದುಕುವುದರ ಜತೆಗೆ ಧರ್ಮದ ತಳಹದಿಯಲ್ಲಿ ನಡೆಯಬೇಕು. ಧರ್ಮದ ಬಗ್ಗೆ ಜಾಗೃತಿ ಹೊಂದಬೇಕೆಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಧರ್ಮದ ದಾರಿಯಲ್ಲಿ ಎಲ್ಲರೂ ಸಹೋದರತ್ವ ಭಾವದಿಂದ ಜೀವನ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವ ಅಸೂಯೆ, ದ್ವೇಷ, ಅಹಂಕಾರ ಹೋಗಲಾಡಿಸಲು ಇಂತಹ ಗುರುಗಳು, ಧರ್ಮಸಭೆಯ ಅಗತ್ಯವಿದೆ. ತಂದೆ-ತಾಯಿ ಸೇವೆಯಲ್ಲೇ ದೇವರನ್ನು ಕಾಣಬೇಕು ಎಂದರು.

ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ರಂಭಾಪುರಿ ಶ್ರೀಗಳ ಮೂಲಕ ಸಾಕ್ಷಾತ್ ದೇವರೇ ಇಲ್ಲಿಗೆ ಬಂದಂತಾಗಿದೆ. ಆಧುನಿಕತೆ ಬರಾಟೆಯಲ್ಲಿ ಮನುಷ್ಯ ಸಹನೆ, ತಾಳ್ಮೆ ಕಳೆದುಕೊಳ್ಳುತ್ತಿದ್ದು, ಪ್ರೀತಿ-ಪ್ರೇಮ, ವಿಶ್ವಾಸವಿಲ್ಲದೆ ಸಂಸಾರಗಳು ಹಾಳಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ರಂಭಾಪುರಿ ಜಗದ್ಗುರುಗಳ ಧರ್ಮೋಪದೇಶದಂತೆ ಸುಖ-ಶಾಂತಿಯಿಂದ ಜೀವನ ನಡೆಸಬೇಕು ಎಂದು ಕೋರಿದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ, ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ಧರ್ಮ, ಸಂಸ್ಕಾರ, ಜೀವನ ಕುರಿತು ಭಕ್ತರಿಗೆ ಮೌಲ್ಯಯುತವಾದ ಉಪದೇಶ ನೀಡಿದರು.

ಶ್ರೀ ಗುರುಲಿಂಗ ಶಿವಾಚಾರ್ಯ, ಶ್ರೀ ವೀರುಪಾಕ್ಷ ಶಿವಾಚಾರ್ಯ, ಶ್ರೀ ಚಂದ್ರಗುಂಡ ಶಿವಾಚಾರ್ಯ, ಶ್ರೀ ಶಿವಕುಮಾರ ಶಿವಾಚಾರ್ಯ, ಶ್ರೀ ಮರುಳಾರಾಧ್ಯ ಶಿವಾಚಾರ್ಯ, ಶ್ರೀ ರುದ್ರಮುನಿ ಶಿವಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ದಾಸೋಹಿ ದಂಪತಿ ಜ್ಯೋತಿ ಅಣ್ಣೆಪ್ಪ ವರನಾಳ, ಪ್ರಮುಖರಾದ ಗುರುರಾಜ ಮೊಳಕೇರಾ, ಸೂರ್ಯಕಾಂತ ಮಠಪತಿ, ಬಸವರಾಜ ಪಾಟೀಲ್ ಬೆಳಕೇರಾ, ದೇವಸ್ಥಾನ ಟ್ರಸ್ಟ್  ಅಧ್ಯಕ್ಷ ವಿಜಯಕುಮಾರ ಬೊಮ್ಮಣ್ಣಿ, ಈರಪ್ಪ ಹೊಸಳ್ಳಿ, ಅಮಿತಕುಮಾರ ತೊಗಲೂರ, ಜೀವನಬಾಬು ಹುಗ್ಗಿ, ಉಮೇಶ ಸೋಲಪುರ, ಶರಣಬಸಪ್ಪ ಚನ್ನೂರ, ಅನೀಲಕುಮಾರ ಸಿರಮುಂಡಿ ಇತರರಿದ್ದರು.

ಅಡ್ಡಪಲ್ಲಕ್ಕಿ ಉತ್ಸವ ವೈಭವ: ಶ್ರೀ ರೇವಣಸಿದ್ಧೇಶ್ವರರ ನೂತನ ರಥೋತ್ಸವ ನಿಮಿತ್ತ ಭಾನುವಾರ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು. ಶ್ರೀ ಗಣೇಶ ಮಂದಿರದಿAದ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದವರೆಗೆ ನಡೆದ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಭಜನೆ ಗಮನ ಸೆಳೆದವು.

ಧರ್ಮ, ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿರುವ ರಂಭಾಪುರಿ ಜಗದ್ಗುರುಗಳ ಕೃಪಾಶೀರ್ವಾದ ಅನೇಕ ಸಲ ಪಡೆದಿದ್ದೇನೆ. ಶ್ರೀಗಳು ಮತ್ತು ಜನರ ಆಶೀರ್ವಾದದಿಂದ ಚಿಕ್ಕ ವಯಸ್ಸಿನಲ್ಲಿ ಶಾಸಕನಾಗಿದ್ದು, ಎಲ್ಲ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಬದ್ಧನಾಗಿರುವೆ.

| ಡಾ.ಸಿದ್ದಲಿಂಗಪ್ಪ ಪಾಟೀಲ್ ಹುಮನಾಬಾದ್ ಶಾಸಕ

ಧರ್ಮ ಪರಂಪರೆ ಉಳಿಸ ಹಾಗೂ ಮಾನವ ಕಲ್ಯಾಣಕ್ಕಾಗಿ ರಾಜ್ಯವಲ್ಲದೆ ದೇಶಾದ್ಯಂತ ಸಂಚರಿಸಿ ರಂಭಾಪುರಿ ಜಗದ್ಗುರುಗಳು ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಸಂಸ್ಕಾರಯುತ ಹಾಗೂ ಉತ್ತಮ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಂಡು ಸುಂದರ ಜೀವನ ಸಾಗಿಸೋಣ.

| ಡಾ.ಶೈಲೇಂದ್ರ ಬೆಲ್ದಾಳೆ ಬೀದರ್ ದಕ್ಷಿಣ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net