ಮನಸ್ಸು, ಹೃದಯಕ್ಕಿಳಿಯದ ಕಾವ್ಯ: ಪ್ರೊ. ಅರವಿಂದ ಮಾಲಗತ್ತಿ

mysore
Published on

ಮೈಸೂರು: ಮೊಬೈಲ್ ಮೂಲಕ ಕಾವ್ಯ ಅಂಗೈಗೆ ಬಂದಿದೆ. ಆದರೆ, ಅದು ಹೃದಯಕ್ಕೆ ಮತ್ತು ಮನಸ್ಸಿಗೂ ಇಳಿಯುತ್ತಿಲ್ಲ ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು.

ಲಗೋರಿ ಸಾಂಸ್ಕೃತಿಕ ಬಳಗದ ವತಿಯಿಂದ ಮಾನಸಗಂಗೋತ್ರಿಯಲ್ಲಿರುವ ಮೈವಿವಿ ಬಸವೇಶ್ವರ ಸಾಮಾಜಿಕ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಡಾ.ನೀಗೂ ರಮೇಶ್ ಅವರ ‘ಗಾಂಧೀಮರ’ ಕಾವ್ಯಾವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಗೈಗೆ ಬಂದಿರುವ ಕಾವ್ಯವು ರೀಲ್ಸ್, ವಿಡಿಯೋ... ಹೀಗೆ ವಿವಿಧ ಡಿಜಿಟಲ್ ರೂಪದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ರೀತಿ ‘ಮಾಧ್ಯಮ ಕವಿತೆ’ ಹೆಚ್ಚು ಬಳಕೆಯಾಗುತ್ತಿದೆ. ಇದರಲ್ಲಿ ಮನಸ್ಸಿಗೆ ಇಳಿದ ಕವಿತೆಗಳು ಎಷ್ಟು? ಲೈಕ್, ಪ್ರತಿಕ್ರಿಯೆ ಕೊಟ್ಟ ಮಾತ್ರಕ್ಕೆ ಅವರು ಓದಿ, ಅರ್ಥೈಸಿಕೊಂಡಿದ್ದಾರೆಂದು ಹೇಳಲಾಗದು. ಅದು ಹೃದಯಕ್ಕೆ ಇಳಿದಾಗಲೇ ಕವಿತೆ ಅರ್ಥವಾಗುತ್ತದೆ ಎಂದರು.

ನವೋದಯ-ನವ್ಯ ಸಾಹಿತ್ಯ ಕಾಲದ ಕಾವ್ಯಕ್ಕೂ, ದಲಿತ-ಬಂಡಾಯ ಸಾಹಿತ್ಯ ಕಾಲದ ಕಾವ್ಯಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ನವೋದಯ ಕಾಲದಲ್ಲಿ ಸುದೀರ್ಘ ಕವಿತೆಗಳು ಅರ್ಥವಾಗಲ್ಲ. 4 ಗೋಡೆ ಮಧ್ಯೆ ಸಿಲುಕಿಕೊಂಡಿರುವ ಸ್ವರೂಪದ ಕಾವ್ಯವಾಗಿತ್ತು.

ಕವಿ ಮತ್ತು ಓದುಗರ ನಡುವೆ ವಿಮರ್ಶಕ ಮುಖ್ಯ. ವಿಮರ್ಶೆ ಮಾಡದೇ ಕಾವ್ಯ ಅರ್ಥೈಸಿಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯವಿತ್ತು. ಇದರಿಂದಲೇ ಕಾವ್ಯ ಭಾರ ಎನಿಸಿತ್ತು. ನವ್ಯ ಸಾಹಿತ್ಯ ಕಾಲದ ಭಾವಗೀತೆ ಸ್ವರೂಪದ ಕಾವ್ಯಗಳು ಆಸ್ವಾದಿಸುವಂತಿತ್ತು. ಕಾವ್ಯದಲ್ಲಿ ತೇಲುವ, ಮುಳುಗುವ, ಅನುಸಂವಾದಿಸುವ ಗುಣ ಅದರಲ್ಲಿತ್ತು ಎಂದರು.

ದಲಿತ, ಬಂಡಾಯ ಸಾಹಿತ್ಯ ಕಾಲದಲ್ಲಿ ಬೀದಿಗೆ ಬಂತು ಕಾವ್ಯ. 4 ಗೋಡೆಯಲ್ಲಿ ಸಿಲುಕಿಕೊಂಡಿದ್ದ ಕಾವ್ಯ ಜನಸಾಮಾನ್ಯರ ಮಟ್ಟಕ್ಕೆ ತರಲಾಯಿತು. ದಲಿತ, ಬಂಡಾಯ ಸಾಹಿತ್ಯ ಎಂದರೆ ಗೋಳು ಹೇಳುವ, ಪ್ರತಿಭಟನೆ ಮಾಡುವುದಷ್ಟೇ. ಇದನ್ನು ಬಿಟ್ಟು ಬೇರೆ ಹೇಳಲ್ಲ ಎಂದು ಮೂಗುಮುರಿಯುತ್ತಾರೆ.

ಆದರೆ, ಬದುಕಿನ ಆಳಕ್ಕೆ ಇಳಿಯುವ ಗುಣವೇ ಕಾವ್ಯ. ಅದು ಗೋಳಿನ, ಪ್ರತಿಭಟನೆಯ ನಡುವಿನ ಮಾತು. ಅದು ಮನೆ, ಸಮುದಾಯ, ಜನರ ಕವಿತೆ ಎಂದರು.

ಕಾವ್ಯಕ್ಕೆ ನಿರ್ದಿಷ್ಟ ಗುರಿ-ದೆಸೆ ಇರಬೇಕು. ಇಲ್ಲವಾದರೆ ಅದು ಚದುರಿದ ಚಿಂತನೆಯಾಗಲಿದೆ. ಈಗಲೂ ಇದೇ ಆಗಿದೆ. ಕಾವ್ಯ ಸದ್ಬಳಕೆ ರೀತಿಯಲ್ಲಿ ಪ್ರವಾಹದ ಅರಿವು ಆಗುತ್ತಿಲ್ಲ. ದಿಕ್ಕು-ದೆಸೆಯೂ ಇಲ್ಲವಾಗಿದೆ. ಕವನ ಬರವಣಿಗೆ ಸುಲಭ. ಇದರಿಂದಾಗಿ ಕವಿಗಳ ಸಂಖ್ಯೆಯೂ ಹೆಚ್ಚು. ಆದರೆ, ಓದುಗರ ಸಂಖ್ಯೆ ಇಲ್ಲ. ಜನಸಮುದಾಯದಲ್ಲಿ ಸಾಹಿತ್ಯ ಓದುವ ಹವ್ಯಾಸ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿರ್ದೇಶಕ, ಬಳಗದ ಗೌರವಾಧ್ಯಕ್ಷ ಡಾ.ನೀಲಗಿರಿ ತಳವಾರ, ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಕವಿ ಡಾ.ನೀ.ಗೂ. ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net