

ಹುಲಸೂರು: ಭಾರತಿಯ ಸಂಸ್ಕೃತಿಯ ಹಬ್ಬ ಮತ್ತು ಉತ್ಸವಗಳು ಮನುಷ್ಯನ ಮನಸ್ಸು ಪರಿಶುದ್ಧಗೊಳಿಸುವ ಜತೆಗೆ ಸಶಕ್ತಗೊಳಿಸುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ಬೇಲೂರ ಗ್ರಾಮದಲ್ಲಿ ಶ್ರೀ ಜೈಭವಾನಿ ೭೮ನೇ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಸಂಜೆ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಭಾರತೀಯ ಸಂಸ್ಕೃತಿ ಉತ್ಕೃಷ್ಟವಾದದ್ದು. ಸಂಸ್ಕೃತಿ ಮತ್ತು ಪರಂಪರೆ ಮೌಲ್ಯಾಚರಣೆಯಿಂದ ಶಾಂತಿ ನೆಲೆಗೊಳ್ಳಲು ಸಾಧ್ಯ ಎಂದರು.
ಬೇಲೂರಿನಲ್ಲಿ ಜಾತ್ರೆ ನಿಮಿತ್ತ ನಡೆದಿರುವ ಈ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿದೆ. ಆರಾಧನೆ, ಆಚರಣೆ, ಸಂಸ್ಕೃತಿ ಇಲ್ಲಿ ಮೇಳೈಸಿದೆ. ಗ್ರಾಮದ ತರುಣರು ಜಾತ್ರೆಯನ್ನು ಅರ್ಥಪೂರ್ಣ ಜತೆಗೆ ವಿಶಿಷ್ಟವಾಗಿ ಪ್ರತಿವರ್ಷ ಅಚರಿಸುವ ಪರಂಪರೆ ಮುಂದುವರಿಸಿಕೊಂಡು ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಗವಂತ ಕೊಟ್ಟ ಮಾನವ ಜನ್ಮ ಅಮೂಲ್ಯವಾದದ್ದು. ಇದನ್ನು ಸಂರಕ್ಷಿಸಿಕೊಳ್ಳುವುದು ಮುಖ್ಯ. ತರುಣ ಸಮಾಜ ಆಧುನಿಕತೆ ಹೆಸರಿನಲ್ಲಿ ಧರ್ಮ, ಸಂಸ್ಕೃತಿಯಿಂದ ದೂರ ಸರಿಯುತ್ತಿರುವುದು ಸರಿಯಲ್ಲ. ದುಶ್ಚಟಗಳಿಗೆ ಬಲಿಯಾಗದೆ ಧರ್ಮದ ದಾರಿಯಲ್ಲಿ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯ ಮಾತನಾಡಿ, ಭಾರತೀಯ ಸಂಸ್ಕೃತಿ ವಿಶೇಷ ಮತ್ತು ವೈಶಿಷ್ಟ್ಯದಿಂದ ಕೂಡಿದೆ. ಇಡೀ ವಿಶ್ವ ಅನುಕರಣೆ ಮಾಡುವಂಥ ಭವ್ಯ ಸಂಸ್ಕೃತಿ ಪರಂಪರೆ ನಮ್ಮದು. ದಸರಾ ಹಬ್ಬ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿ ನೆಲೆಸಿರುವ ನಮ್ಮವರು ಸಂಭ್ರಮದಿಂದ ಆಚರಿಸಿ ದೇವಿಯನ್ನು ಆರಾಧಿಸುತ್ತಾರೆ ಎಂದರು.
ಬೇಲೂರದಲ್ಲಿ ೭೮ ವರ್ಷಗಳಿಂದ ಜಾತ್ರಾ ಮಹೋತ್ಸವ ಪ್ರತಿವರ್ಷ ಸಂಭ್ರಮದಿಂದ ನಡೆಸಲಾಗುತ್ತಿದೆ. ಯುವ ಪ್ರತಿಭೆಗಳಿಗೆ ಸನ್ಮಾನ, ಹಿರಿಯರಿಗೆ ಗೌರವ, ಬದುಕು ಕಟ್ಟಿಕೊಳ್ಳಲು ದೂರದ ಊರಿಗೆ ಹೋಗಿರುವ ಗ್ರಾಮದ ಸಾಧಕರ ಸನ್ಮಾನ ಮಾಡುವ ಪರಂಪರೆ ಶ್ಲಾಘನೀಯ ಎಂದು ಹೇಳಿದರು.
ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಮಾತನಾಡಿ, ಮೈಸೂರಿನಲ್ಲಿ ವೈಭವದ ದಸರಾ ದರ್ಬಾರ್ ನಡೆದರೆ, ಕಲ್ಯಾಣದಲ್ಲಿ ಶ್ರೀ ರಂಭಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಗುರುಮನೆಯ ದಸರಾ ಧರ್ಮ ಸಮ್ಮೇಳನ ಸಂಭ್ರಮದಿAದ ನಡೆದಿದೆ. ಬೇಲೂರಿನಲ್ಲೂ ಭಕ್ತಿ-ಶ್ರದ್ಧೆಯಿಂದ ಹಳ್ಳಿ ದರ್ಬಾರ್(ಉತ್ಸವ) ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಉದ್ಘಾಟನೆ ನೆರವೇರಿಸಿದ ಕೆಎಎಸ್ ಅಧಿಕಾರಿ ಸಾವಿತ್ರಿ ಸಲಗರ ಮಾತನಾಡಿ, ಭಕ್ತಿಯಿಂದ ಎಲ್ಲರೂ ಸೇರಿ ಆಚರಿಸುವ ಜಾತ್ರೆಗಳು ಭಾರತೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗಲು ಸಹಕಾರಿ ಜತೆಗೆ ಹಳ್ಳಿಗಳಲ್ಲಿ ಸಾಮರಸ್ಯ ಗಟ್ಟಿಗೊಳಿಸಲು ಪೂರಕವಾಗುತ್ತವೆ ಎಂದು ಹೇಳಿದರು.
ಬೀದರ್ ಬ್ರಿಮ್ಸ್ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ವಿಜಯಕುಮಾರ ಅಂತಪ್ಪನೋರ್ ಮಾತನಾಡಿ, ಶಿಕ್ಷಣ ಜತೆ ಮಕ್ಕಳಿಗೆ ಧರ್ಮ, ಸಂಸ್ಕಾರ ತಿಳಿಸಿಕೊಡುವ ಅಗತ್ಯವಿದೆ ಎಂದರು.
ತಾಂಬೋಳದ ಶ್ರೀ ವಿಜಯಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಶರಣು ಸಲಗರ, ಗ್ರಾಪಂ ಅಧ್ಯಕ್ಷೆ ಕರುಣಾಬಾಯಿ ಪರೆಪ್ಪ, ಪ್ರಮುಖರಾದ ಶಿವಕುಮಾರ ಪಾಟೀಲ್, ರಾಮಣ್ಣ ಹುಲಸೂರೆ, ರಾಮಲಿಂಗ ಸಾಗಾವೆ, ವಿಜಯಕುಮಾರ ಪಾಟೀಲ್, ಶಿವಕುಮಾರ ಅಂತಪ್ಪನೋರ್, ಸಿದ್ರಾಮ ಕವಳೆ, ಸಂತೋಷ ಸೆಡೋಲೆ, ಹುಲೆಪ್ಪ ಪಾಟೀಲ್, ಚನ್ನು ಸ್ವಾಮಿ, ನಾಗನಾಥ ಬಾಗ, ಮಲ್ಲು ಬರಗಲೆ, ಅಶೋಕ ಚನಕೋಟೆ, ಶಾಲಿವಾನ ಸತಾನೆ, ಬಸವರಾಜ ಗುಂಗೆ, ಸಂಜು ಮಡಗೆ, ಶಿವಕುಮಾರ ಹೊಳ್ಳೆ, ಬಸವಕಲ್ಯಾಣದ ಸುರೇಶ ಸ್ವಾಮಿ, ರಮೇಶ ರಾಜೋಳೆ ಇತರರಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ ಸ್ವಾಗತಿಸಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ದಸರಾ ಸಂದರ್ಭದಲ್ಲಿ ದೇವಿ ಆರಾಧನೆ ನಡೆಯುತ್ತದೆ. ಈ ಉತ್ಸವವನ್ನು ಎಲ್ಲ ಜಾತಿ, ಸಮುದಾಯದವರು ಭಕ್ತಿಯಿಂದ ನಡೆಸುತ್ತಾರೆ. ಹಬ್ಬದ ನಿಮಿತ್ತ ಮನೆ ಶುದ್ಧಿ ಜತೆಗೆ ಪೂಜೆ, ಆರಾಧನೆಯಿಂದ ಅಂತರAಗ ಶುದ್ಧಿಯಾಗುತ್ತದೆ. ಬಾಹ್ಯ ಶುದ್ಧಿ ಜೊತೆಗೆ ಅಂತರಿಕ ಶುದ್ಧಿಗೆ ಭಾರತೀಯ ಪರಂಪರೆ ಹಬ್ಬಗಳು ಸಹಕಾರಿಯಾಗಿವೆ.
| ಶ್ರೀ ಡಾ.ವೀರಸೋಮೇಶ್ವರ ಜಗದ್ಗುರು
ರಂಭಾಪುರಿ
ಬೇಲೂರಿನಲ್ಲಿ ಪ್ರತಿವರ್ಷ ಭಕ್ತಿಯಿಂದ ಜೈಭವಾನಿ ಜಾತ್ರೋತ್ಸವ ನಡೆದಿದೆ. ಸೆ.೨೧ರಿಂದ ಅ.೭ರವರೆಗೆ ನಡೆವ ಜಾತ್ರೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಸಮಾರಂಭಗಳನ್ನು ಆಯೋಜಿಸಲಾಗಿದೆ. ಮಹೋತ್ಸವದ ಕೊನೆಯ ದಿನವಾದ ಅ.೭ರಂದು ಆನೆ ಅಂಬಾರಿ ಮೇಲೆ ದೇವಿಯ ಭವ್ಯ ಮೆರವಣಿಗೆ ಸಾಂಸ್ಕೃತಿಕ ವೈಭವದಿಂದ ಜರುಗಲಿದೆ.
| ಸೂರ್ಯಕಾಂತ ಚಿಲ್ಲಾಬಟ್ಟೆ ಉತ್ಸವ ಸಮಿತಿ ಅಧ್ಯಕ್ಷ