ಮನಸ್ಸು ಮುದಗೊಳಿಸಿದ ಪ್ರತಿಭಾ ಕಾರಂಜಿ : ಆಡಿ ನಲಿದ ಮಕ್ಕಳು ಗಮನ ಸೆಳೆದ ವೇಷಭೂಷಣ

31 yelandur 01
Published on


ಚಾಮರಾಜನಗರ : ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವೇಷಭೂಷಣ, ಹಾಡುಗಾರಿಕೆ, ಮಣ್ಣಿನಿಂದ ಮಾದರಿ ತಯಾರಿಕೆ, ಅಭಿನಯ ಗೀತೆ, ಕಂಠಪಾಠ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು.


ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಇಂತಹ ವೇದಿಕೆಗಳು ಸಾಕ್ಷಿಯಾಗಿವೆ. ಇದರೊಂದಿಗೆ ಶಾಲಾ ಶಿಕ್ಷಕರು ಮಕ್ಕಳನ್ನು ಇದಕ್ಕೆ ಸಿದ್ಧಪಡಿಸುವ ಪರಿ ಶಾಲಾ ಶಿಕ್ಷಕರಿಗೂ ಸವಾಲಾಗಿರುತ್ತದೆ.
ಈ ಮೂಲಕ ಕಲಿಕೆಯಲ್ಲಿ ಹೊಸತನವನ್ನು ತರುವ ಉದ್ದೇಶದಿಂದ ಇಂತಹ ಚಟುವಟಿಕೆಗಳು ಹೆಚ್ಚು ಸಹಕಾರಿಯಾಗಿವೆ.

ಕ್ಲಸ್ಟರ್ ಹಂತದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಗ್ರಾಮೀಣ ಮಕ್ಕಳಿಗೆ ಇಂತಹ ವೇದಿಕೆ ತುಂಬಾ ಸಹಕಾರಿಯಾಗಿದೆ. ತಾಲೂಕಿನ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿದ್ದು, ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಇದಕ್ಕೆ ಕಾರಣರಾದ ಶಿಕ್ಷಕರು ಹಾಗೂ ಪಾಲಕರಿಗೆ ಅಭಿನಂದನೆ ಎಂದು ತಿಳಿಸಿದರು.


ಚಂದ್ರಯಾನ -3, ನವಿಲು, ಆಮೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ಉಡುಪು, ಹೆಣ್ಣು ಭ್ರೂಣ ಹತ್ಯೆ, ಮಹಿಷಾಸುರ ಸೇರಿದಂತೆ ವಿವಿಧ ವೇಷ, ಭೂಷಣ ತೊಟ್ಟ ಮಕ್ಕಳು ಗಮನ ಸೆಳೆದರು.

ಭಗವದ್ಗೀತೆ ಕಂಠಪಾಠ, ವಚನ ಗಾಯನ, ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳ ಆಯೋಜನೆ ಮಾಡಲಾಗಿತ್ತು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಎಂ.ಮಂಜುನಾಥ್, ಜಿಲ್ಲಾ ನೋಡಲ್ ಅಧಿಕಾರಿ ಪುಷ್ಪರಾಜು, ಇಸಿಒ ಶಿವಲಂಕಾರ್, ಬಿಆರ್‌ಸಿ ರಂಗಸ್ವಾಮಿ, ಬಿಆರ್‌ಪಿ ದೊರೆಸ್ವಾಮಿ, ಪುಷ್ಪಲತಾ, ಮುಖ್ಯ ಶಿಕ್ಷಕರಾದ ಕುಮಾರಿ, ಚಂದ್ರಮ್ಮ, ಪುಟ್ಟಿ ಅಮ್ಮನಪುರ ಮಹೇಶ್, ರಘು, ಮಂಜುನಾಥ್, ಸೋಮಣ್ಣ, ಮಹದೇವು, ದಿವಾಕರ್, ನಾಗರಾಜು ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net