

ತುಮಕೂರು: ಪರಿಶುದ್ಧ ರಾಜಕಾರಣ ನಡೆಸಿದ ಎಸ್.ಎಂ.ಕೃಷ್ಣ ಅವರ ಘನತೆ, ಗಾಂಭೀರ್ಯ, ತೂಕದ ಮಾತುಗಳಿಂದ ಎಲ್ಲ ಸಮುದಾಯಗಳ ಮನಸ್ಸನ್ನು ಗೆದ್ದಿದ್ದವರು. ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ ಬಡವರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಸ್ಮರಿಸಿದರು.
ನಗರದ ಕನ್ನಡ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಎಸ್ಎಂಕೆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ನಾಟಕದಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಆ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ ಧೀಮಂತ ನಾಯಕ ಎನ್ನಿಸಿಕೊಂಡವರು. ಇವರ ಮರಣ ರಾಜಕಾರಣ, ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ರಾಜಕಾರಣದಲ್ಲಿ ಯುವಕರ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಪಾರ ಸವಾಲು ಎದುರಿಸಬೇಕಾಯಿತು. ಜಾಣ್ಮೆಯಿಂದ ಬಗೆಹರಿಸಿ ಸರ್ಕಾರ ಮುನ್ನಡೆಸಿದ ಮುತ್ಸದ್ಧಿ ರಾಜಕಾರಣಿ. ಅಮೆರಿಕದಲ್ಲಿ ವಿದ್ಯಾಭ್ಯಾಸವಾಗಿದ್ದರೂ ಶಿಸ್ತಿನ ದಿನಚರಿಯಿಂದ ಎಲ್ಲರ ಗಮನ ಸೆಳೆಯುತ್ತಾರೆ ಎಂದರು. ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಬೆಂಗಳೂರಿಗೆ ಐಟಿ, ಬಿಟಿ ಕಂಪನಿಗಳನ್ನು ತರುವ ಮೂಲಕ ನವ ಬೆಂಗಳೂರು ನಿಮಾರ್ಪಕರೆನಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಜತೆಗೂ ಒಡನಾಟ ಹೊಂದಿದ್ದ ಇವರು 2002ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರಿನಲ್ಲಿ ನಡೆದಾಗ ಅದರ ಉದ್ಘಾಟನೆ ನೆರವೇರಿಸಿ ಪ್ರಸ್ತುತ ಕನ್ನಡ ಭವನಕ್ಕೆ ಶಿಲಾನ್ಯಾಸ ಮಾಡಿದುದನ್ನು ಸ್ಮರಿಸಿದರು.
ತುಮಕೂರಿನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 50 ಲಕ್ಷ ರೂ. ಸರ್ಕಾರದಿಂದ ಬಿಡುಗಡೆ ಮಾಡಿ ಸಾಹಿತ್ಯದ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ ಎಂದರು. ನಿವೃತ್ತ ಪ್ರಾಚಾರ್ಯ ಡಾ.ಟಿ.ಆರ್.ಲೀಲಾವತಿ ಮಾತನಾಡಿ, ಅಜಾತಶತ್ರುವಾಗಿದ್ದ ಎಸ್.ಎಂ.ಕೃಷ್ಣ ಅವರು ಭಾರತದ ವಿದೇಶಾಂಗ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಿದವರು. ಕರ್ನಾಟಕದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೊಳಿಸಿದ ಶ್ರೇಷ್ಠ ರಾಜಕಾರಣಿ ಎಂದರು. ನಿವೃತ್ತ ಪ್ರಾಧ್ಯಾಪಕ ಡಾ.ಸಿದ್ದಲಿಂಗಯ್ಯ ಮಾತನಾಡಿ, ಸೋಮನಹಳ್ಳಿ ಎಂಬ ಕುಗ್ರಾಮದಲ್ಲಿ ಜನಿಸಿ ಅಧಿಕಾರದ ಎಲ್ಲ ಮಜಲುಗಳ ಅನುಭವ ಪಡೆದುಕೊಂಡಿದ್ದ ಎಸ್.ಎಂ.ಕೃಷ್ಣ ಅವರು ರಾಜಕಾರಣದ ಅನಭಿಶಕ್ತ ದೊರೆಯಂತಿದ್ದು, ಎಲ್ಲ ಪಕ್ಷಗಳ ನಾಯಕರಿಗೆ ಪ್ರೀತಿಪಾತ್ರರಾಗಿದ್ದರು ಎಂದರು. ಕಸಾಪ ತಾಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಬೆಸ್ಟೆಕ್ಸ್ ರಾಮರಾಜು, ಜಿ.ಎಚ್.ಮಹದೇವಪ್ಪ, ನಟರಾಜು, ಚಾಂದು ಇದ್ದರು.