ಮನಸ್ಸು ಗೆದ್ದವರು ಜಗತ್ತನ್ನೇ ಗೆಲ್ಲಬಲ್ಲರು

29
Published on

ಶ್ರೀ ರಾಮಕೃಷ್ಣ ಶಿಕ್ಷಕರ ಸಮ್ಮೇಳನದಲ್ಲಿ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿಕೆ]

ತುಮಕೂರು:ರಾಷ್ಟ್ರದ ಭವಿಷ್ಯ ಶಿಕ್ಷಕರ ಕೈಯಲ್ಲಿರುವುದರಿಂದ ನಿಸ್ಸಂದೇಹವಾಗಿ ಅವರೇ ನೈಜ ರಾಷ್ಟ್ರ ನಿಮಾರ್ಪಕರು ಎಂದು ಗದಗ- ವಿಜಯಪುರ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಅಭಿಪ್ರಾಯಪಟ್ಟರು.

ನಗರದ ರಾಮಕೃಷ್ಣ&-ವಿವೇಕಾನಂದ ಆಶ್ರಮದಲ್ಲಿ ರಾಮಕೃಷ್ಣ- ವಿವೇಕಾನಂದ ಭಾವಪ್ರಚಾರ ಪರಿಷತ್​ನ

ದಶಮಾನೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ "ಶ್ರೀರಾಮಕೃಷ್ಣ ಶಿಕ್ಷಕರ ಸಮ್ಮೇಳನ'ದ ನೇತೃತ್ವವಹಿಸಿ ಮಾತನಾಡಿ, ಶಕ್ತಿವಂತ, ಶ್ರದ್ಧಾವಂತ ಹಾಗೂ ನೀತಿವಂತ ಯುವಕ&ಯುವತಿಯರು ಶಿಕ್ಷಕರಾದರೆ ಭಾರತವನ್ನು ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ ರಾಷ್ಟ್ರವನ್ನಾಗಿ ರೂಪಿಸಬಹುದು ಎಂದರು.

ಮನಸ್ಸೇ ಶಕ್ತಿಯ ಆಗರ. ಮನಸ್ಸು ಜಾಗೃತವಾದರೆ ಏಕಾಗ್ರತೆ, ಗ್ರಹಣ ಸಾಮರ್ಥ್ಯ ತಾನಾಗಿಯೇ ಸಿದ್ಧಿಸುತ್ತದೆ. ಮನಸ್ಸನ್ನು ಗೆದ್ದವರು ಜಗತ್ತನ್ನೇ ಗೆಲ್ಲಬಲ್ಲರು. ಶಿಕ್ಷಕರು ಆಸಕ್ತಿವಹಿಸಿ ಮಕ್ಕಳಿಗೆ ಶಿಕ್ಷಣ ನೀಡುವ ಜತೆಗೆ ಕಟಿಬದ್ಧತೆ, ದಕ್ಷತೆ ರೂಢಿಸಬೇಕು. ಪ್ರಾಚಿನ ಭಾರತ ನಿರ್ಮಾಣಗೊಂಡ ಇತಿಹಾಸವನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಸಲಹೆಯಿತ್ತರು.

ಆಂಧ್ರಪ್ರದೇಶ, ಕಡಪ ರಾಮಕೃಷ್ಣ ಮಿಷನ್​ನ ಮುಖ್ಯಸ್ಥ ಸ್ವಾಮಿ ಅನುಪಮಾನಂದಜೀ ಮಾತನಾಡಿ, ಶಿಕ್ಷಕರು ಮಕ್ಕಳ ಜ್ಞಾನದಮಟ್ಟಕ್ಕೆ ಇಳಿದು ಅರ್ಥವಾಗುವಂತೆ ಕಲಿಸಬೇಕು. ವಿಷಯ ಸಂಗ್ರಹದೊಂದಿಗೆ ಶಿಕ್ಷಕನು ಜ್ಞಾನದ ಹಂಬಲವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಜೀವನದ ಹೋರಾಟವನ್ನು ಎದುರಿಸಲು ಮಕ್ಕಳನ್ನು ಸಿದ್ಧಪಡಿಸಬೇಕು. ಅವರಿಗೆ ಜಗತ್ತಿನ ಹಾಗೂ ಜೀವನದ ವ್ಯಾಪಕತೆಯನ್ನು ಅರ್ಥ ಮಾಡಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರಿಗೆ ಜೀವನಪರ್ಯಂತ ಕೃತಜ್ಞರಾಗಿರುತ್ತಾರೆ. ಈ ನಿಟ್ಟಿನಲ್ಲಿ ಆದರ್ಶಗುರುವಾಗಿದ್ದ ಶ್ರೀರಾಮಕೃಷ್ಣರು ಶಿಷ್ಯ ವಿವೇಕಾನಂದರಿಗೆೆ ಸಣ್ಣ ಕೆಲಸಗಳಿಂದ ಹಿಡಿದು ಆಧ್ಯಾತ್ಮಿಕ ಸಾಧನೆಯವರೆಗೆ ಎಲ್ಲ ರೀತಿಯಲ್ಲಿ ತರಬೇತಿ ನೀಡಿದರು ಎಂದು ಹೇಳಿದರು.

ಬೆಂಗಳೂರು ಬಸವನಗುಡಿ ರಾಮಕೃಷ್ಣ ಮಠದ ಸ್ವಾಮಿ ವೀರೇಶಾನಂದಜೀ, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆ ಮುಖ್ಯಸ್ಥ ಸ್ವಾಮಿ ಯುಕ್ತೇಶಾನಂದಜೀ, ತುಮಕೂರು ಡಯಟ್​ನ ಉಪನಿರ್ದೇಶಕ ಕೆ.ಮಂಜುನಾಥ್​, ಬಿಇಒ ಹನುಮಂತಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಕೆ.ವಿ.ಅನಸೂಯಾ ಮತ್ತಿತರರು ಉಪಸ್ಥಿತರಿದ್ದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಗತಿಸಿ, ವಂದಿಸಿದರು. ಸ್ವಾಮಿ ಪ್ರಕಾಶಾನಂದಜೀ ಕಾರ್ಯಕ್ರಮ ನಿರೂಪಿಸಿದರು.

ಕಲಿಯುವ ಯುಗವಾಗವಾಗಲಿ

ಶಿಕ್ಷಕರಾದವರು ವೃತ್ತಿ, ವಿಷಯ ಹಾಗೂ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು. ಬೋಧನಾಸಕ್ತಿ ಹಾಗೂ ಜ್ಞಾನದ ಹಸಿವು ಇರಬೇಕು. ಇದು ಕಲಿಯುಗವಾಗದೆ ಕಲಿಯುವ ಯುಗವಾಗಬೇಕು. ವಿಷಯಗಳ ವ್ಯಾಪ್ತಿ, ಸಿದ್ಧಾಂತಗಳು ಹಾಗೂ ಉಪಯುಕ್ತತತೆ ನಿರಂತರ ಬದಲಾವಣೆ ಆಗುತ್ತಿರುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಜೀವಿತಾವಧಿಯ ಕೊನೆಯವರೆಗೂ ಕಲಿಯುತ್ತಿರಬೇಕು. ಕಲಿಯುವವರು ಹಾಗೂ ಕಲಿಸುವವರಿಬ್ಬರೂ ವಿನಯ ಭಾವನೆ ಹೊಂದಿರಬೇಕು ಎಂದು ರಾಣಿಬೆನ್ನೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ನುಡಿದರು.

ಹೊಸ ವಿಚಾರ ತಿಳಿಯಿರಿ

ಶಿಕ್ಷಕರು ನಿರಂತರ ಕಲಿಯುವ ಪ್ರಕ್ರಿಯೆಯಲ್ಲಿ ತೊಡಗಿರಬೇಕು. ಮನಸ್ಸನ್ನು ಕಟ್ಟುವ, ಉನ್ನತ ಚಿಂತನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಜವಾಬ್ದಾರಿ ಹೊಂದಿರಬೇಕು. ಹೊಸ ವಿಚಾರ, ತತ್ವ ಸಂಶೋಧನೆಗಳ ಬಗ್ಗೆ ಸದಾ ತಿಳಿಯುತ್ತಿರಬೇಕು. ಆಗಷ್ಟೇ ಶಿಕ್ಷಕರು ರಾಷ್ಟ್ರರಕ್ಷಕರಾಗಬಲ್ಲರು ಎಂದು ಮೈಸೂರಿನ ಶ್ರೀ ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜೀ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net