'ಮನಸ್ಸಿನ ಭಯ ತೊಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಲಹೆ'

17
Published on

ಮೈಸೂರು: ನಗರದ ದಕ್ಷ ಕಾಲೇಜಿನಲ್ಲಿ ‘ಜಾಗತಿಕ ಒಳನೋಟಗಳು: ತಂತ್ರಜ್ಞಾನ ಯುಗದಲ್ಲಿ ವೃತ್ತಿಜೀವನ ಮಾರ್ಗದರ್ಶನ, ಕಾರ್ಪೊರೇಟ್ ಮತ್ತು ವೈಜ್ಞಾನಿಕ ದೃಷ್ಟಿಕೋನಗಳು’ ವಿಷಯ ಕುರಿತು ಮಂಗಳವಾರ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಐಸ್ಟೀರ್ ಟೆಕ್ನಾಲಜಿಸ್‌ನ ಸಿಸ್ಟಮ್ ಇಂಟಿಗ್ರೇಷನ್ ಸ್ಪೆಷಲಿಸ್ಟ್ ಹಸ್ಬಿ ಶಾಜಲಿ ಮಾತನಾಡಿ, ನಿಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಭಯವನ್ನು ಬಿಟ್ಟು ಮುನ್ನುಗ್ಗಬೇಕು. ಗುರಿಯನ್ನು ಈಡೇರಿಸಿಕೊಳ್ಳುವಾಗ ಹಿಂಜರಿಕೆ ಸಹಜವಾಗಿರುತ್ತದೆ. ಹಾಗಾಗಿ ಮನಸ್ಸಿನ ಭಯವನ್ನು ತೊಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಐಸ್ಟೀರ್ ಟೆಕ್ನಾಲಜಿಸ್‌ನ ಇಂಟಿಗ್ರೇಷನ್ ಕನ್ಸಲ್ಟೆಂಟ್ ಸಾತಿಯ ಸೀಲನ್ ಮಾತನಾಡಿ, ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಕಾರ್ಯಕ್ಷಮತೆ, ದಕ್ಷತೆ ಹಾಗೂ ಶಿಸ್ತು ಮುಖ್ಯ. ಶಿಸ್ತುಬದ್ಧ ಜೀವನ ಮತ್ತು ಕರ್ತವ್ಯ ನಿಷ್ಠೆಗಳು ನಿಮ್ಮನ್ನು ಜೀವನದಲ್ಲಿ ಉತ್ತುಂಗಕ್ಕೆ ಕರೆದೊಯ್ಯುತ್ತವೆ ಎಂದು ಹೇಳಿದರು.

ಐಸ್ಟೀರ್ ಟೆಕ್ನಾಲಜಿಸ್‌ನ ಹಿರಿಯ ಉಪಾಧ್ಯಕ್ಷ ಮೊಹಮ್ಮದ್ ರಿಯಾಜ್ ಮಾತನಾಡಿ, ಇಂದಿನ ಸ್ಪರ್ಧಾ ಯುಗದಲ್ಲಿ ಸಂವಹನ ಮತ್ತು ಕೌಶಲಗಳು ಬಹಳ ಮುಖ್ಯ. ನಿಮಗಿರುವ ಕೌಶಲಗಳು ಬೇರೆಯವರನ್ನು ಮುಟ್ಟಬೇಕಾದರೆ ಸಂವಹನ ಅತ್ಯಗತ್ಯವಾದದ್ದು. ಆ ಮೂಲಕವೇ ನೀವು ಹೊರ ಜಗತ್ತಿಗೆ ತೆರೆದುಕೊಳ್ಳುತ್ತೀರಿ ಎಂದು ತಿಳಿಸಿದರು.

ದಕ್ಷ ಕಾಲೇಜಿನ ಅಧ್ಯಕ್ಷ ಜಯಚಂದ್ರ ರಾಜು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳೊಂದಿಗೆ ವಿದ್ಯಾರ್ಥಿಗಳನ್ನು ಬೆಸೆದಾಗ ನೀವು ಮುಂದೆ ಆರಿಸಿಕೊಳ್ಳುವ ಕ್ಷೇತ್ರದಲ್ಲಿ ಮೇಲೇರಲು ಮತ್ತು ಆ ಮಾರ್ಗದಲ್ಲಿ ಮುನ್ನುಗ್ಗಲು ಸಹಕಾರಿಯಾಗುತ್ತದೆ ಎಂದರು.

ಐಸ್ಟೀರ್ ಟೆಕ್ನಾಲಜಿಸ್‌ನ ಸಿಇಒ ಉಮಾಶಂಕರ್, ದಕ್ಷ ಕಾಲೇಜಿನ ಉಪಾಧ್ಯಕ್ಷೆ ಅನಿತಾ ರಾಜು, ವ್ಯವಸ್ಥಾಪಕ ನಿರ್ದೇಶಕ ಗೌತಮ್ ರಾಜು, ಉನ್ನತ ಶಿಕ್ಷಣ ನಿರ್ದೇಶಕ ಪಿ.ಹರೀಶ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಮಹೇಶ, ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ಅಭಿಷೇಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net