

ಶಹಾಪುರ: ಬುದ್ಧಿ, ಬಲ, ಆರೋಗ್ಯ, ಯಶಸ್ಸು ಮತ್ತು ಮನಸ್ಸಿನ ನೆಮ್ಮದಿಗಾಗಿ ಶ್ರೀ ಹನುಮಂತ ದೇವರ ನಾಮಸ್ಮರಣೆ ಬಹಳ ಅಗತ್ಯವಾಗಿದೆ ಎಂದು ಸುರಪುರನ ಪಂ.ಹರೇರಾಮ ಪಾಲ್ಮೂರ ಹೇಳಿದರು.
ನಗರದ ಬೆಟ್ಟದಲ್ಲಿ ಮಹಿಪತಿದಾಸರು ತಪೋಗೈದ ಮಂದಾಕಿನಿ ತೀರ್ಥದ ವೀರಾಂಜನೇಯ ದೇವಸ್ಥಾನದಲ್ಲಿ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ವಿವೇಕಾನಂದ ಯುವ ಬಳಗ ಹಾಗೂ ವೀರಾಂಜನೇಯ ಸ್ವಾಮಿ ಭಕ್ತರಿಂದ ಹಮ್ಮಿಕೊಂಡ ಪವಮಾನ ಹೋಮ ಕಾಕ್ರಕ್ರಮದಲ್ಲಿ ಮಾತನಾಡಿದ ಅವರು, ಹನುಮಂತ ದೇವರು ಉಜ್ವಲಶಿರೋಮಣಿಯಾಗಿದ್ದು, ಭಾರತದ ಜನತೆಯ ದೇವತೆ ಎಂಬುದಕ್ಕೆ ಪ್ರತಿಯೊಂದು ಹಳ್ಳಿಯಲ್ಲಿಲ್ಲೂ ಹನುಮಂತ ದೇವರ ದೇವಸ್ಥಾನ ಇರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಜೀವಕ್ಕೆ ಮುಖ್ಯಪ್ರಾಣಧಾರಕವಾಗಿರುವ, ಮುಖ್ಯ ಪ್ರಾಣನೆಂದು ಕರೆಯಲ್ಪಡುವ ಸ್ವಾಮಿಯನ್ನು ನಿಷ್ಠೆಯಿಂದ ಭಜಿಸಿದರೆ ಸಕಲ ಇಷ್ಟಾರ್ಥಗಳು ಈಡೇರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಈ ವೇಳೆ ವೀರಾಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಜರುಗಿತು. ಮಳೆಯಲ್ಲಿಯೇ ಯುವ ಭಕ್ತರು ಸನ್ನಿಧಾನದಲ್ಲಿ ಪ್ರಸಾದ ತಯಾರಿಸಿ ನೈವೇದ್ಯ ಅರ್ಪಿಸಿದರು. ಪೂಜಾ ಕಾರ್ಯ ನೆರವೇರಿಸಿದ ಯುವ ಪಂಡಿತ ಶ್ರೀ ಹರೇರಾಮ ಪಾಲ್ಮೂರ ಅವರಿಗೆ ಇತ್ತೀಚಿಗೆ ಭಾರತೀಯ ಸೇನೆಯಲ್ಲಿ ಹಿಂದು ಧರ್ಮ ಗುರು ಪಂಡಿತ ಹುದ್ದೆಗೆ (ಆರ್‌ಟಿಜೆಸಿಒ) ಆಯ್ಕೆಯಾಗಿದ್ದರಿಂದ ವಿವೇಕಾನಂದ ಯುವ ಬಳಗದಿಂದ ಸನ್ಮಾನಿಸಲಾಯಿತು. ಹಿರಿಯರಾದ ಕೊನೇರಾಚಾರ್ಯ ಸಗರ ಇತರರಿದ್ದರು.