

ಚಿಂತಾಮಣಿ: ಮನಸ್ಸು ಮತ್ತು ಇಂದ್ರೀಯಗಳು ಶತ್ರುಗಳಾಗದಂತೆ ನೋಡಿಕೊಳ್ಳ ಬೇಕು. ಮನಸ್ಸಿನ ಖಡ್ಗದಿಂದ ಮಾಯೆಯನ್ನು ಹೊಡೆದೊಡಿಸಿ ಗೆಲುವು ಸಾಧಿಸಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಹಿತವಚನ ನೀಡಿದರು.
ತಾಲೂಕಿನ ಕುರಟಹಳ್ಳಿ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಕೈವಾರದ ಶ್ರೀಯೋಗಿನಾರೇಯಣ ಮಠದಿಂದ ಹಮ್ಮಿಕೊಂಡಿದ್ದ ಆತ್ಮಬೋಧಾಮೃತ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಧೂಳು ಕವಿದ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವುದಿಲ್ಲ, ಅದೇ ರೀತಿ ರಾಗ, ದ್ವೇಷಗಳಿಂದ ಕೂಡಿದ ಮನಸ್ಸಿಗೆ ಮಾನವನ ನಿಜ ಸ್ವರೂಪವೆನೆಂದು ಅರ್ಥವಾಗುವುದಿಲ್ಲ. ನಿಜ ಸ್ವರೂಪ ಅರಿಯಲು ಮಾಯೆ ಅಡ್ಡಿಯಾಗಿದ್ದು, ಗುರುವಿನ ಸ್ಮರಣೆಯೊಂದೇ ಮಾಯೆ ಹೊಡೆದೋಡಿಸಲು ಇರುವ ಏಕೈಕ ಸಾಧನ ಎಂದರು.
ಇಂದ್ರೀಯಗಳ ಆಕರ್ಷಣೆಯಿಂದ ಮನಸ್ಸು ಭೋಗಾಸಕ್ತವಾಗುತ್ತದೆ, ಅಂತ್ಯವಿಲ್ಲದ ಬಯಕೆಗಳಿಂದ ಅತೃಪ್ತಿ ಉಂಟಾಗುತ್ತದೆ. ಈ ಬಯಕೆಗಳನ್ನು ಪೂರೈಸಿಕೊಳ್ಳಲು ನಾವು ಮಾಡುವ ಕರ್ಮಗಳಿಂದ ಸ್ವರ್ಗ-ನರಕ ಏರ್ಪಡುತ್ತದೆ. ನಾವು ಈಗ ಮಾಡುವ ಕರ್ಮಗಳು ನಮ್ಮ ಮುಂದಿನ ಜನ್ಮಗಳನ್ನು ನಿರ್ಧರಿಸುತ್ತದೆ. ಆದ್ದರಿಂದ ವಿವೇಕಯುತವಾದ ಬದುಕು ನಡೆಸಬೇಕು. ಹುಟ್ಟು-ಸಾವುಗಳ ಚಕ್ರಕ್ಕೆ ಬದ್ಧನಾಗದೆ ಜನ್ಮರಾಹಿತ್ಯ ಪಡೆಯಬೇಕಾದರೆ ಇಂದ್ರೀಯಗಳನ್ನು ಜಯಿಸಬೇಕು ಎಂದರು.
ಕಾರ್ಯಕ್ರಮಕ್ಕೂ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ವರೆಗೂ ಶೋಭಾಯಾತ್ರೆ ನಡೆಸಲಾಯಿತು, ನಂತರ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಎ.ಚೌಡರೆಡ್ಡಿ, ಕೈವಾರ ಮಠದ ಉಪಾಧ್ಯಕ್ಷ ಜೆ.ವಿ.ಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ವೀರಾಂಜನೇಯಸ್ವಾಮಿ ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ರಾಧಾಕೃಷ್ಣ, ಎಪಿಎಂಸಿ ಅಧ್ಯಕ್ಷ ಕುರುಟಹಳ್ಳಿ ಕೃಷ್ಣಮೂರ್ತಿ, ಟಿಪಿಎಸ್ ಸದಸ್ಯ ಕೃಷ್ಣಪ್ಪ, ಅಧ್ಯಾತ್ಮ ಚಿಂತಕ ಗಡದಾಸನಹಳ್ಳಿ ಈರೇಗೌಡ, ಸಂಜೀವಪ್ಪನವರ ಸೀನಪ್ಪ, ಪ್ರಕಾಶ್‌ರೆಡ್ಡಿ ಗ್ರಾಮಸ್ಥರು ಇದ್ದರು.