

ಮೈಸೂರು: ಯಾಂತ್ರೀಕೃತ, ಒತ್ತಡದ ಜೀವನದಲ್ಲಿ ಕಳೆದು ಹೋಗಿರುವ ಜನರ ಮನಸ್ಸಿಗೆ ಮುದ ನೀಡಲು ಚುಟುಕು ಸಾಹಿತ್ಯ ಅಗತ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವಿಜಯನಗರ 1ನೇ ಹಂತದಲ್ಲಿರುವ ಸಾಹಿತ್ಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ದಸರಾ ಚುಟುಕು ಕವಿಗೋಷ್ಠಿಯಲ್ಲಿ ಮಾತನಾಡಿದರು.
ಇದು ಆಕಾರದಲ್ಲಿ ಚಿಕ್ಕದಾದರೂ ದೊಡ್ಡ ಸಂಗತಿಗಳು, ಸಮಾಜದ ಸೂಕ್ಷ್ಮತೆಗಳು, ಬದುಕಿನ ಲಾಲಿತ್ಯವನ್ನು ಅರ್ಥಗರ್ಭಿತವಾಗಿ ವಿವರಿಸುತ್ತದೆ. ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತಹ ಸರಳ ಶಬ್ದಗಳಲ್ಲಿ ನಿರೂಪಿಸುವ ಚುಟುಕು ಸಾಹಿತ್ಯವು ಓದುಗರ ಮನಸ್ಸಿಗೆ ಕಚಗುಳಿ ಇಟ್ಟು, ಅವರನ್ನು ಜಾಗೃತಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದರು.
ಬದುಕನ್ನು ಗಟ್ಟಿಗೊಳಿಸಿದ ವಚನ ಸಾಹಿತ್ಯವೆಲ್ಲವೂ ಚುಟುಕುಗಳೇ. ಈ ಸಾಹಿತ್ಯವನ್ನು ಗುಟುಕಾಗಿ ಸ್ವೀಕರಿಸಿ, ಜೀವನವನ್ನು ಗಟ್ಟಿಯಾಗಿ ಕಟ್ಟಬೇಕಿದೆ. ಚುಟುಕು ಸಾಹಿತ್ಯವು ಪಂಚಿಂಗ್ ಮೂಲಕ ಮಿಂಚಿನ ರೀತಿಯಲ್ಲಿ ಕೇಳುಗರನ್ನು ಆಕರ್ಷಣೆ ಮಾಡಲಿದೆ. ಜತೆಗೆ, ಬದುಕಿನ ಲಾಲಿತ್ಯ ಮಾತ್ರವಲ್ಲದೆ ಭಾವನೆಗಳ ಸಾಂಗತ್ಯವಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ತೋಂಟದಾರ್ಯ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಅಂಚೆ ಇಲಾಖೆ ವಿಶ್ರಾಂತ ಹಿರಿಯ ಅಧೀಕ್ಷಕ ಕೆ.ಓಬಯ್ಯ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರತ್ನಾ ಹಾಲಪ್ಪ, ಚುಟುಕು ಸಾಹಿತಿ ಡಾ.ಎಂ.ಜಿ.ಆರ್.ಅರಸ್ ಇನ್ನಿತರರಿದ್ದರು.