

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಗರದ ಮಯೂರ ನೃತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ದುರ್ಗಾ ಡೆವಲಪರ್ಸ್ ಆಂಡ್ ಪ್ರಮೋಟರ್ಸ್ ಸಹಯೋಗದೊಂದಿಗೆ ಸವಾಯಿ ಗಂಧರ್ವ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಅಂಬಾ ಶ್ರೀದೇವಿ ನೃತ್ಯ ವೈಭವ -ಮಕ್ಕಳ ನೃತ್ಯ ಪ್ರದರ್ಶನ ನೋಡುಗರ ಮನಸೂರೆಗೊಂಡಿತು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ್ ನಾವಡ ಮಾತನಾಡಿ, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ನೃತ್ಯ ಕಲೆಗೆ ನಿರೀಕ್ಷಿತ ಮಟ್ಟದಲ್ಲಿ ಪ್ರೋತ್ಸಾಹ ದೊರಕುತ್ತಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹದಲ್ಲಿ ಇಂದಿನ ಯುವ ಪೀಳಿಗೆ ಸಿಲುಕಿರುವುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಮಯೂರ ನೃತ್ಯ ಅಕಾಡೆಮಿಯ ಕಾರ್ಯ ಶ್ಲಾಘನೀಯ ಎಂದರು.
ಭಾರತೀಯ ಕಲೆ ಮತ್ತು ಸಂಸ್ಕೃತಿ ಉಳಿದಾಗ ಮಾತ್ರ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ ಎಂದು ಹೇಳಿದರು.
ಅಕಾಡೆಮಿ ಅಧ್ಯಕ್ಷೆ ವಿದುಷಿ ಹೇಮಾ ವಾಘಮೋಡೆ, ಅಕಾಡೆಮಿ ವತಿಯಿಂದ ರಾಜ್ಯಾದ್ಯಂತ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. ಆಸಕ್ತ ಪ್ರತಿಯೊಬ್ಬ ಮಕ್ಕಳಿಗೂ ನೃತ್ಯ ಕಲೆ ಕಲಿಸುವ ಕಾಯಕದಲ್ಲಿ ತಾವು ತೊಡಗಿಸಿಕೊಂಡಿದ್ದೇವೆ ಎಂದರು.
ಶಾಸಕ ಅರವಿಂದ ಬೆಲ್ಲದ, ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ನ ವ್ಯವಸ್ಥಾಪಕ ನಿರ್ದೇಶಕ ವೀರೇಶ ಉಂಡಿ, ಸತೀಶ ಶೆಟ್ಟಿ, ಗುರುನಾಥ ಬಡಿಗೇರ, ಸೋಮಶೇಖರ ನಾಯ್ಕರ್, ಇತರರು ಇದ್ದರು. ಅಕಾಡೆಮಿಯಿಂದ ವಿದ್ವಾನ ಕೆ. ಚಂದ್ರಶೇಖರ ನಾವಡ ಅವರನ್ನು ಸನ್ಮಾನಿಸಲಾಯಿತು.