ಮನಸಿನ ನಿಯಂತ್ರಣವಿಲ್ಲದೆ ಸಾಧನೆ ಅಸಾಧ್ಯ

27SGR6
ಸಾಗರದಲ್ಲಿ ನವರಾತ್ರ ನಮಸ್ಯಾದ 5ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಹಲವು ಗಣ್ಯರಿಗೆ ಆಶೀರ್ವದಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಶಿಮೂಲ್ ಅಧ್ಯಕ್ಷ ವಿದ್ಯಾಧರ ಆಶೀರ್ವಾದ ಪಡೆದರು.
Published on

ವಿಜಯವಾಣಿ ಸುದ್ದಿಜಾಲ ಸಾಗರ

ಮನಸ್ಸು, ದೇಹ ನಮ್ಮ ವಶದಲ್ಲಿಲ್ಲ ಎಂದಾದರೆ ಯಾವ ಸಾಧನೆಯನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ. ಸಾಧನೆಗೆ ಕಾಯಕದಲ್ಲಿ ನಿರಂತರತೆ ಬಹಳ ಮುಖ್ಯವಾದದ್ದು ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಸಾಗರ ಅಗ್ರಹಾರದಲ್ಲಿರುವ ಶ್ರೀರಾಘವೇಶ್ವರ ಭವನದಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ ಐದನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದ ಅವರು, ಇಂದು ಊರು, ರಾಜ್ಯ, ಜಗತ್ತು ತನ್ನ ವಶವಾಗಬೇಕು ಎನ್ನುವ ಮನಸ್ಸು ಹೊಂದಿರುವ ಮನುಷ್ಯ ತನ್ನನ್ನು ತಾನು ವಶ ಇಟ್ಟುಕೊಳ್ಳಲಾಗದಿರುವ ಪರಿಸ್ಥಿತಿಯಲ್ಲಿದ್ದಾನೆ. ಕ್ಷಣಕ್ಕೂ ಚಂಚಲವಾಗುವ ಮನಸ್ಸು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದಿರುವ ಮನುಷ್ಯ ಕನಿಷ್ಟ ದೇಹದ ಆರೋಗ್ಯವನ್ನಾದರೂ ವಶದಲ್ಲಿಟ್ಟುಕೊಂಡಿದ್ದಾನೆ ಎಂದರೆ ಖಂಡಿತ ಇಲ್ಲ, ದೇಹವೂ ನಮ್ಮ ವಶದಲ್ಲಿಲ್ಲ. ಹೀಗಿದ್ದೂ ಬೇರೆಯದನು ನನ್ನದಾಗಿಸಿಕೊಳ್ಳುವ ಆಸೆ ಹೊಂದುವುದು ವಿಪರ್ಯಾಸ ಎಂದರು.

ತಾಯಿ ಮತ್ತು ಗುರುವಿನ ತತ್ವಗಳು ಒಂದೆ. ಅದು ವಾತ್ಸಲ್ಯ, ತಾಯಿ ಹೃದಯವಿಲ್ಲದವರು ಗುರುವಾಗುವುದಕ್ಕೆ ಸಾಧ್ಯವಿಲ್ಲ ಹಾಗೂ ಗುರು ಒಲಿಯುವುದಕ್ಕೂ ತಾಯಿಯ ಆಶೀರ್ವಾದಬೇಕು ಎಂದರು.

ನವರಾತ್ರ ನಮಸ್ಯಾ ಸಮಿತಿಯಿಂದ ಶ್ರೀಮಠದ ಪರವಾಗಿ ಕೊಡಮಾಡಿದ ಸಮಾಜ ಗೌರವವನ್ನು ಜೋಗಿ ಸಮಾಜ, ಬಿಲ್ಲವ ಯಾನೆ ಪೂಜಾರ ಸಮಾಜ, ನಾಮದೇವ ಸಮಾಜ, ಒಕ್ಕಲಿಗರ ಸಮಾಜ ಹಾಗೂ ನಾಮಧಾರಿ ಸಮಾಜದ ಪರವಾಗಿ ಆಯಾ ಸಮಾಜದ ಸತೀಶ್ ಜೋಗಿ, ಸುಂದರ್, ರಾಘವೇಂದ್ರ, ಗುಂಡಪ್ಪ ಗೌಡ, ಕೆ.ಎಸ್.ವೆಂಕಟೇಶ್ ಸ್ವೀಕರಿಸಿದರು.

ಶಾಸಕ ಗೋಪಾಲಕೃಷ್ಣ ಬೇಳೂರು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಶಿಮೂಲ್ ಅಧ್ಯಕ್ಷ ವಿದ್ಯಾಧರ ಮತ್ತಿತರರಿದ್ದರು. ಚಿತ್ರ ಕಲಾವಿದೆ ಶ್ರೀಲಕ್ಷ್ಮೀ ಪ್ರವಚನಕ್ಕೆ ಪೂರಕವಾಗಿ ಸ್ಥಳದಲ್ಲಿಯೇ ಚಿತ್ರರಚಿಸಿ ಮೆಚ್ಚುಗೆಗೆ ಪಾತ್ರರಾದರು.

ನವರಾತ್ರ ನಮಸ್ಯಾ ಸಮಿತಿಯ ಗುರುಮೂರ್ತಿ ಹೆಗಡೆ, ಪ್ರಸನ್ನ ಹೆಗಡೆ ಕೆರೆ ಕೈ, ಶಿವರಾಮಯ್ಯ, ನಾರಾಯಣ ಸಂಪ, ಅಶೋಕ ಅತ್ತಿಸರ, ರಮೇಶ್ ಹೆಗಡೆ ಗುಂಡೂಮನೆ, ರಾಮಚಂದ್ರ, ಸುಬ್ರಮಣ್ಯ ಐಸಿರಿ, ಶ್ರೀನಾಥ ಸಾರಂಗ, ರವಿ ಕೆತೋಟ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net