ಮನನೊಂದು ಸ್ವಯಂ ವರ್ಗಾವಣೆ ಕೋರಿದ ಹಾಸನ ಡಿವೈಎಸ್‌ಪಿ ಉದಯ್ ಭಾಸ್ಕರ್

ಮನನೊಂದು ಸ್ವಯಂ ವರ್ಗಾವಣೆ ಕೋರಿದ ಹಾಸನ ಡಿವೈಎಸ್‌ಪಿ ಉದಯ್ ಭಾಸ್ಕರ್
Published on

ಹಾಸನ : ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಇದ್ದಿದ್ದರಿಂದ ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಆದ್ದರಿಂದ ಚುನಾವಣೆ ಮುಗಿಯುವವರೆಗೂ ನನ್ನನ್ನು ಬೇರೆಡೆಗೆ ವರ್ಗಾಯಿಸಿ,’ ಎಂದು ಹಾಸನ ಉಪವಿಭಾಗದ ಡಿವೈಎಸ್‌ಪಿ ಉದಯ್ ಭಾಸ್ಕರ್ ಮನನೊಂದು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ನಾನು ಜಿಲ್ಲೆಯಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನೇರ ನಡೆ, ನುಡಿವುಳ್ಳ್ಳವನಾಗಿರುವುದರಿಂದ ರಾಜಕಾರಣಿಗಳು ನನ್ನಿಂದ ಕಾನೂನುಬಾಹಿರ ಕ್ರಮಗಳನ್ನು ಅಪೇಕ್ಷಿಸುತ್ತಿದ್ದಾರೆ. ಅವರ ಒತ್ತಡಕ್ಕೆ ಮಣಿಯದೆ ಇದ್ದಿದ್ದರಿಂದ ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ,’ ಎಂದು ಪರೋಕ್ಷವಾಗಿ ರೇವಣ್ಣ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

‘ಹಾಸನ ಉಪವಿಭಾಗದ ಪೊಲೀಸ್ ಠಾಣೆಗಳು ರೌಡಿಗಳ ಹಿಡಿತದಲ್ಲಿವೆ. ಡಿವೈಎಸ್‌ಪಿ ಉದಯ ಭಾಸ್ಕರ್ ಅವರು ಅಪರಾಧ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಅವರನ್ನು ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡುಲಾಗುವುದು’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹಲವು ಬಾರಿ ಆರೋಪ ಮಾಡಿದ್ದರು.

ಈ ಆರೋಪಗಳಿಂದ ಬೇಸತ್ತು ಡಿವೈಎಸ್‌ಪಿ ಉದಯ್ ಭಾಸ್ಕರ್ ಅವರು ‘ಚುನಾವಣೆ ಸಂದರ್ಭದಲ್ಲಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಗೊಂದಲ ಉಂಟು ಮಾಡುವುದು ಖಚಿತವಾಗಿರುವುದರಿಂದ ನಿಷ್ಪಕ್ಷಪಾತ ಮತ್ತು ಸುಗಮವಾಗಿ ಚುನಾವಣೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ವಿರುದ್ಧ ಕೆಲವರು ಹಗೆ ಸಾಧಿಸುತ್ತಿರುವ ಕಾರಣ ಮೇಲಾಧಿಕಾರಿಗಳಿಗೂ ಇರಿಸು- ಮುರಿಸು ಉಂಟಾಗುತ್ತದೆ. ಹಾಗಾಗಿ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಹಾಸನ ಜಿಲ್ಲೆಯಿಂದ ತಮಗೆ ಸರಿ ಎನಿಸಿದ ಸ್ಥಳಕ್ಕೆ ತಾತ್ಕಾಲಿಕ ವರ್ಗಾವಣೆಗೆ ಮಾಡಿಕೊಡಬೇಕು,’ ಎಂದು ಉದಯ್ ಭಾಸ್ಕರ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಉದಯ್ ಭಾಸ್ಕರ್ ಅವರು ಸ್ವಯಂ ವರ್ಗಾವಣೆ ಕೋರಿ ಮೇಲಾಧಿಕಾರಿಗಳಿಗೆ ಬರೆದಿರುವ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net