ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಕವಿ ಲಕ್ಷ್ಮಣ್‌ರಾವ್

08 yelandur 01
ಯಳಂದೂರು ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್‌ರಾವ್ ಮಾನತಾಡಿದರು. ಪೂರ್ವ ಕಾಲೇಜಿನ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕಾಂತರಾಜು ಸೇರಿದಂತೆ ಇತರರು ಇದ್ದರು.
Published on

ಯಳಂದೂರು: ನಿಮ್ಮ ಸಾಹಿತ್ಯ ನವೋದಕ್ಕೆ ಹೇಗೆ ಒಗ್ಗಿಕೊಂಡಿತು? ನೀವು ಭಾವಗೀತೆಗಳಿಗೆ ಆದ್ಯತೆ ಕೊಟ್ಟಿದ್ದು ಏಕೆ? ನಾಡು-ನುಡಿ ಬೆಳೆಸಬೇಕಾದರೆ ವಿದ್ಯಾರ್ಥಿಗಳಿಗೆ ನೀವು ಕೊಡುವ ಸಂದೇಶವೇನು? ಕಾವ್ಯ ಕಟ್ಟುವುದು ಹೇಗೆ? ನಿಮಗೆ ಸಿಟ್ರಿಕ್ ಕವಿ ಎಂದು ಹೆಸರು ಬರಲು ಕಾರಣವೇನು?

ಹೀಗೆ ಒಂದೊಂದೇ ಪ್ರಶ್ನೆಗಳು ವಿದ್ಯಾರ್ಥಿಗಳಿಂದ ತೂರಿ ಬರುತ್ತಿದ್ದರೆ ಅಷ್ಟೇ ಶಾಂತಚಿತ್ತದಿಂದ ಉತ್ತರ ನೀಡುತ್ತ ತಮ್ಮ ಕಾವ್ಯಗಳಿಗೆ ಸ್ಫೂರ್ತಿ ಏನು? ನೀವು ಏನು ಮಾಡಬೇಕು? ಎಂದು ಎಳೆಎಳೆಯಾಗಿ ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ಬಿಚ್ಚಿಟ್ಟಿದ್ದು ಕನ್ನಡ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್‌ರಾವ್. ಇದಕ್ಕೆ ಸಾಕ್ಷಿಯಾಗಿದ್ದು ಯಳಂದೂರು ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆ. ಈ ಶಾಲೆಯಲ್ಲಿ ಶನಿವಾರ ರಂಗವಾಹಿನಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಲಕ್ಷ್ಮಣ್‌ರಾವ್ ಮನ ಬಿಚ್ಚಿ ಮಾತನಾಡಿದರು.

ಅಮ್ಮ ನಿನ್ನ ಎದೆಯಾಳದಲ್ಲಿ.. ಹೆಣ್ಮಕ್ಕಳ ಗೀತೆಯಾಗಿರುವುದು ದುರಂತ-ಅಮ್ಮ ನಿನ್ನ ಎದೆಯಾಳದಲ್ಲಿ ಹಾಡಿಗೆ ಸ್ಫೂರ್ತಿ ಯಾರು? ಎಂದು ವಿದ್ಯಾರ್ಥಿನಿ ತ್ರಿವೇಣಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ್‌ರಾವ್ ಇದಕ್ಕೆ ನಮ್ಮನೇ ಸ್ಫೂರ್ತಿ. ಇದರ ಜೊತೆಗೆ ಈ ನೆಲ ಭೂ ತಾಯಿಯೂ ಸ್ಫೂರ್ತಿಯಾಗಿದೆ. ಆದರೆ ಇದೊಂದು ಹೆಣ್ಮಕ್ಕಳ ಗೀತೆಯಾಗಿರುವುದು ದುರಂತವಾಗಿದೆ. ನನಗೂ ಈ ಬಗ್ಗೆ ಬೇಸರವಿದೆ. ಈ ಗೀತೆಯಲ್ಲಿ ತಾಯಿ ಹಾಗೂ ಭೂತಾಯಿ ಇಬ್ಬರೂ ಇದ್ದಾರೆ. ಯಾರೂ ಬೇಕಾದರೂ ಇದನ್ನು ಹಾಡಬಹುದು ಎಂದರು.

ವಿದ್ಯಾರ್ಥಿ ವರದರಾಜು ನಿಮಗೆ ಸಿಟ್ರಿಕ್ ಕವಿ ಎಂಬ ಹೆಸರು ಬರಲು ಕಾರಣ ಏನೆಂದು ಕೇಳಿದಾಗ, ಇದಕ್ಕೆ ನಾನು ರಚಿಸಿದ ನಿಂಬೆಗಿಡ ತುಂಬ ಚೆಂದ ಕವಿತೆ ಕಾರಣವಾಗಿರಬಹುದು ಎಂದು ಲಕ್ಷ್ಮಣ್‌ರಾವ್ ಉತ್ತರಿಸಿದರು.

ಕನ್ನಡ ಹೃದಯದ ಭಾಷೆ: ವಿದ್ಯಾರ್ಥಿನಿ ಪ್ರೀತಿ ಕೇಳಿದ ಪ್ರಶ್ನೆಗೆ, ಕನ್ನಡ ಹೃದಯದ ಭಾಷೆಯಾಗಬೇಕು. ನಾನು ಕನ್ನಡಕ್ಕೋಸ್ಕರ ಉರ್ದು, ಆಂಗ್ಲ, ತಮಿಳು, ತೆಲುಗು ಸೇರಿದಂತೆ ಇತರ ಭಾಷೆಗಳನ್ನು ಕಲಿತೆ. ನೀವು ಸರ್ಕಾರಿ ಶಾಲೆಗಳಲ್ಲಿ ಕಲಿಯಿರಿ, ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ, ಶ್ರೀಮಂತಿಕೆಯಿಂದ ಸಂತೋಷ ಸಿಗುವುದಿಲ್ಲ. ಮನಸ್ಸು ಸಂತೋಷವಾಗಿದ್ದರೆ ಅದೇ ದೊಡ್ಡ ಶ್ರೀಮಂತಿಕೆಯಾಗಿದೆ ಎಂದು ಲಕ್ಷ್ಮಣ್‌ರಾವ್ ಮನದಾಳದ ನುಡಿಗಳನ್ನಾಡಿದರು.
ಗಿರಿಜಾ ಲಕ್ಷ್ಮಣ್‌ರಾವ್, ಸುಧಾ ರಂಗವಾಹಿನಿ ಕಲಾತಂಡದ ಸಿ.ಎಂ.ನರಸಿಂಹಮೂರ್ತಿ, ಕಲಾವಿದ ಅರುಣ್‌ಕುಮಾರ್, ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕಾಂತರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಜಯ, ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಶಿಕ್ಷಣ ಸಂಯೋಜಕ ಶಿವಲಂಕಾರ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net