

ರಾಮನಗರ: ಕಾಲರಾ ಒಂದು ಬ್ಯಾಕ್ಟೀರಿಯಾ ಸೋಂಕಾಗಿದ್ದು, ಇದು ಕಲುಷಿತ ನೀರು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ ಹರಡುವ ಸೋಂಕು ಈ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರು ಮತ್ತು ಆಹಾರ ಸೇವನೆಗೆ ಎಲ್ಲರೂ ಹೆಚ್ಚು ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಜೆ. ಅರ್ಪಿತಾ ತಿಳಿಸಿದರು.
ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಲಕ್ಷ್ಮೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಬೇಸಿಗೆ ಸಮಯದಲ್ಲಿನ ಮುನ್ನೆಚ್ಚರಿಕೆ ಕುರಿತು ಸೋಮವಾರ ಆಯೋಜಿಸಲಾಗಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲರಾ ಸೋಂಕಿನ ಲಕ್ಷಣಗಳು ಆಹಾರ ಸೇವನೆಯ ನಂತರ ವಾಂತಿಯಾಗುವುದು, ಅತಿಯಾದ ನೀರಿನಿಂದ ಕೂಡಿದ ಬೇದಿ, ಅತಿಸಾರದ ಪರಿಣಾಮದಿಂದಾಗಿ ದೇಹದಲ್ಲಿ ನಿಶ್ಯಕ್ತಿ, ನಿರ್ಜಲೀಕರಣದಿಂದಾಗಿ ಬಾಯಿ, ಕಣ್ಣುಗಳು ಒಣಗುವುದು, ಮೂತ್ರ ವಿಸರ್ಜನೆ ಇಲ್ಲದಿರುವುದು, ವಿಪರೀತ ಬಾಯಾರಿಕೆ ಮತ್ತು ಸುಸ್ತು, ಅತಿಯಾದ ನಿದ್ದೆ, ತಲೆನೋವು, ಮಾಂಸ ಖಂಡಗಳ ಸೆಳೆತ, ಹೃದಯ ಬಡಿತ ಸಾಮಾನ್ಯಕಿಂತ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ದೇಹದ ತೂಕವು ಕಡಿಮೆಯಾಗುತ್ತದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಸಂಪೂರ್ಣ ಗುಣಪಡಿಸಬಹುದು ಎಂದು ಮನವಿ ಮಾಡಿದರು.
ಸಾರ್ವಜನಿಕರು ಹಬ್ಬ, ಜಾತ್ರೆ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕಾಲರಾ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳಾದ ಕುಡಿಯುವ ನೀರಿನ ಶುದ್ಧತೆ ಬಗ್ಗೆ ಎಚ್ಚರ ವಹಿಸುವುದು. ಚೆನ್ನಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು, ಸೊಪ್ಪು ತರಕಾರಿಗಳನ್ನು ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸಿದ ನಂತರ ಸೇವಿಸುವುದು, ಶೌಚಗೃಹವನ್ನು ಬಳಸಿದ ನಂತರ ಹಾಗೂ ಆಹಾರವನ್ನು ತಯಾರಿಸುವ, ಸೇವಿಸುವ ಮೊದಲು ಸಾಬೂನು ಬಳಸಿ ಕೈಯನ್ನು ಚೆನ್ನಾಗಿ ತೊಳೆಯುವುದು, ಮನೆ ಆಹಾರ ಸೇವನೆಗೆ ಆದ್ಯತೆ ನೀಡಿ, ಅಸುರಕ್ಷಿತವಾಗಿ ತಯಾರಿಸಿದ ಹೊರಗಿನ ಆಹಾರವನ್ನು ಸೇವಿಸುವ ಮುನ್ನ ಎಚ್ಚರ ವಹಿಸುವುದು, ದೇಹದಲ್ಲಿ ಬಳಲಿಕೆ ಕಂಡುಬಂದರೆ ಓ.ಆರ್.ಎಸ್, ಉಪ್ಪು ಬೆರೆಸಿದ ನಿಂಬೆ ಪಾನಕ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರ ಬಗ್ಗೆ ಆರೋಗ್ಯ ಶಿಕ್ಷಣದ ಕುರಿತು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಉಮಾ ಮಾತನಾಡಿ, ಬೇಸಿಗೆಯಲ್ಲಿ ಬಿಸಿ ಗಾಳಿಯ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದಲ್ಲಿ ಸೂರ್ಯಾಘಾತ ಸಾಧ್ಯತೆ ಅಧಿಕವಾಗಿರುತ್ತದೆ. ಸೂರ್ಯಾಘಾತದಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡದಿರುವುದು, ಹೆಚ್ಚು ಶುದ್ಧ ನೀರನ್ನು ಕುಡಿಯುವುದು, ತಿಳಿ ಹತ್ತಿ ಬಟ್ಟೆಯನ್ನು ಧರಿಸುವುದು, ಸಕ್ಕರೆಯುಕ್ತ ಪಾನೀಯ / ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯದಿರುವುದು, ಒ.ಆರ್.ಎಸ್, ಎಳನೀರಿನ ಬಳಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಉಮಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಾಸಪ್ಪ, ಎಪಿಡೆಮೋಲಜಿಸ್ಟ್ ನಿವೇದಿತಾ, ಮುಂತಾದವರು ಇದ್ದರು.