ಮಧ್ಯವರ್ತಿಗಳಿಲ್ಲದೆ ಜನರ ಕೆಲಸ ಮಾಡಿಕೊಡಿ

MLA
Published on

ಹೊಸದುರ್ಗ: ಪುರಸಭೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಜನರ ಕೆಲಸವನ್ನು ನೇರ ಹಾಗೂ ಶೀಘ್ರವಾಗಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಪುರಸಭೆಯಲ್ಲಿ ಅವರಿಲ್ಲದೆ ಕೆಲಸಗಳು ನಡೆಯುವುದಿಲ್ಲ ಎನ್ನುವ ಗಂಭೀರ ಆರೋಪಗಳಿವೆ. ಇನ್ನು ಮುಂದೆ ಇದಕ್ಕೆಲ್ಲ ಅಂತ್ಯ ಹಾಡಬೇಕು. ಜನಸಾಮಾನ್ಯರೇ ಪ್ರಶಸ್ತಿ ನೀಡುವಷ್ಟರ ಮಟ್ಟಿಗೆ ಜನಸ್ನೇಹಿ ಕಾರ್ಯಶೈಲಿಯ ಆಡಳಿತ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಆಸ್ತಿ ದಾಖಲೆ ಪಡೆಯಲು, ಮೂಲ ಸಮಸ್ಯೆಗಳನ್ನು ಹೇಳಿಕೊಳ್ಳಲು, ವೈಯಕ್ತಿಕ ಕೆಲಸ ಕಾರ್ಯಗಳಿಗಾಗಿ ಪುರಸಭೆಗೆ ಬರುವ ಜನರನ್ನು ಅಲೆದಾಡಿಸಬೇಡಿ. ಇಂತಹ ಪ್ರಕರಣಗಳು ಕಂಡುಬಂದರೆ, ಸಾರ್ವಜನಿಕರಿಗೆ ತೊಂದರೆಯಾದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಟ್ಟಣದ ಜನರಿಗೆ ಮೂಲ ಸೌಲಭ್ಯಗಳನ್ನು ದೊರಕಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಪಟ್ಟಣದ ಸ್ವಚ್ಛತೆ ಹಾಗೂ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.

ಕೆಲ್ಲೋಡು ಬ್ಯಾರೆಜ್‌ನ ಪಂಪ್‌ಹೌಸ್‌ನಲ್ಲಿ ವಿದ್ಯುತ್ ತೊಂದರೆಯಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿಯೇ ಹೊಸದುರ್ಗದ ವಿದ್ಯುತ್ ವಿತರಣಾ ಕೇಂದ್ರದಿಂದ ನೇರವಾಗಿ ಪಂಪ್‌ಹೌಸ್‌ಗೆ ಹೊಸ ವಿದ್ಯುತ್ ಮಾರ್ಗ ನಿರ್ಮಿಸಲಾಗುವುದು ಎಂದರು.
ಸಭೆಯಲ್ಲಿ ಪುರಸಭೆ ಅಡಳಿತಾಧಿಕಾರಿ ಚಂದ್ರಯ್ಯ, ಮುಖ್ಯಾಧಿಕಾರಿ ನರಸಿಂಹಮೂರ್ತಿ, ತಹಸೀಲ್ದಾರ್ ಪಟ್ಟರಾಜ ಗೌಡ ಇತರರಿದ್ದರು.

ಬಹುಗ್ರಾಮ ಯೋಜನೆ ಅನಾಥ!
2018ರಲ್ಲಿ ಶಾಸಕನಾಗಿದ್ದಾಗ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಶುದ್ಧ್ದ ಕುಡಿಯುವ ನೀರೊದಗಿಸಲು ಭದ್ರಾ ಜಲಾಶಯದಿಂದ 1 ಟಿಎಂಸಿ ನೀರು ಮಂಜೂರು ಮಾಡಿಸಿ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ ಆರಂಭಿಸಲಾಗಿತ್ತು. ಆನಂತರದಲ್ಲಿ ಇದು ಅನಾಥವಾಯಿತು. ಐದು ವರ್ಷ ಕಳದರೂ ತಾಲೂಕಿನಲ್ಲಿ ಒಂದು ಅಡಿ ಕೊಳವೆಮಾರ್ಗ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಜನಪರ ಯೋಜನೆ ಜಾರಿಯಾಗಲು ವಿಳಂಬವಾಗಿದೆ ಎಂದು ಶಾಸಕರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net