

ಕಿಕ್ಕೇರಿ: ರೈತರು, ಜನಸಾಮಾನ್ಯರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಕಂದಾಯ ಇಲಾಖೆ ಮನೆ ಬಾಗಿಲಿಗೇ ಆಗಮಿಸಿದೆ. ಹಾಗಾಗಿ ಮಧ್ಯವರ್ತಿಗಳನ್ನು ಅವಲಂಬಿಸಿ ಮೋಸ ಹೋಗದಿರಿ ಎಂದು ತಹಸೀಲ್ದಾರ್ ಎಂ.ವಿ.ರೂಪಾ ತಿಳಿಸಿದರು.
ಹೋಬಳಿಯ ಐಕನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ 2 ಲಕ್ಷಕ್ಕೂ ಅಧಿಕ ಆರ್‌ಟಿಸಿದಾರರಿದ್ದು ಬಹುತೇಕ ಎಲ್ಲವನ್ನು ಒಗ್ಗೂಡಿಸಲಾಗಿದೆ. ಇಲಾಖೆಯಲ್ಲಿ 450 ಅರ್ಜಿ ಬಾಕಿ ಇದೆ. ಸಮಸ್ಯೆಗಳ ಬಗ್ಗೆ ತಿಳಿಸಿದರೆ ತಿಳಿವಳಿಕೆ ಪತ್ರ ನೀಡಿ, ಸ್ಕೆಚ್ ಮಾಡಿಸುವ ಮುನ್ನ ಸರಿಪಡಿಸಲಾಗುವುದು. ರೈತರು ಸೂಕ್ತ ದಾಖಲಾತಿ ಒದಗಿಸಿದರೆ ಸ್ಥಳದಲ್ಲಿಯೇ ಪೋಡಿ ಮಾಡಲಾಗುವುದು ಎಂದರು.
ಅನ್ನದಾತರು ಕಚೇರಿಯಿಂದ ಕಚೇರಿಗೆ ಅರ್ಜಿ ಹಿಡಿದು ಅಲೆದಾಡುವುದು ಬೇಡ. ಮಳೆಯಿಂದ ಹಾನಿಯಾದ ಮನೆ, ಬೆಳೆ ನಷ್ಟಗಳಿಗೆ ಸೂಕ್ತ ದಾಖಲೆಗಳನ್ನು ತ್ವರಿತವಾಗಿ ಅಧಿಕಾರಿಗಳಿಗೆ ನೀಡಬೇಕು. ಮಾಸಾಶನ ಸಮಸ್ಯೆಗಳಿದ್ದಲ್ಲಿ ಇಲಾಖೆಗೆ ತಿಳಿಸಬೇಕು. ಆಗ ನಿಜವಾದ ಅರ್ಹರಿಗೆ ಸವಲತ್ತು ನೀಡಲು ಸಹಕಾರಿಯಾಗುತ್ತದೆ ಎಂದರು.
ಉಪ ತಹಸೀಲ್ದಾರ್ ಲಕ್ಷ್ಮೀಕಾಂತ, ಐಕನಹಳ್ಳಿ ಗ್ರಾಪಂ ಅಧ್ಯಕ್ಷ ಎ.ಎಸ್. ಮಂಜೇಗೌಡ, ಉಪಾಧ್ಯಕ್ಷೆ ನಾಗಮಣಿ, ಪಂಚಾಯತ್ ರಾಜ್ ತಾಲೂಕು ಸಹಾಯಕ ನಿರ್ದೇಶಕ ಡಾ. ನರಸಿಂಹರಾಜು, ಪಿಡಿಒ ವಿಜಯಕುಮಾರ್, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಲೆಕ್ಕಿಗರಾದ ಸೋಮಾಚಾರ್, ತಿಪ್ಪೇಶ್, ಸುನಿಲ್, ಪರಿಮಳಾ, ಮುಖಂಡರಾದ ಉದಯ್, ರಾಮೇಗೌಡ ಮತ್ತಿತರರಿದ್ದರು.