ಮಧ್ಯರಾತ್ರಿ ಗುಂಡಿನ ಮೊರೆತ

5 Dwd 1 (Shivayogi)
Published on

ಧಾರವಾಡ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬ ಗುಂಡಿಗೆ ಬಲಿಯಾದ ಘಟನೆ ನಗರದ ಮದಿಹಾಳದ ಗಣೇಶನಗರದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.

ನವಲಗುಂದ ತಾಲೂಕಿನ ಶಿರೂರ ಗ್ರಾಮದ ಶ್ರೀಶೈಲ ಎಂ.ಜಿ. ಎಂಬಾತ ತನ್ನ ರಿವಾಲ್ವರ್​ನಿಂದ ಗುಂಡು ಹಾರಿಸಿದ್ದು, ಮದಿಹಾಳದ ಶಿವಯೋಗಿ ಭಾವಿಕಟ್ಟಿ ಎಂಬ ಯುವಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಸುನೀಲ ಕೋನಣ್ಣವರ ಹಾಗೂ ಈರಪ್ಪ ಯಂಗಳ್ಳಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ: ಆರೋಪಿ ಶ್ರೀಶೈಲ ಶಿರೂರ ಗ್ರಾಮದವನು. 6 ತಿಂಗಳ ಹಿಂದೆ ಇಲ್ಲಿಯ ಮದಿಹಾಳದ ಗಣೇಶ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ. ಈತ ಮತ್ತು ಈರಪ್ಪ ಯಂಗಳ್ಳಿ ಎಂಬಾತನ ಮಧ್ಯೆ ಆಸ್ತಿ ವಿವಾದ ಇದೆ ಎನ್ನಲಾಗಿದೆ. ಈರಪ್ಪ ತನ್ನ ಪರಿಚಯಸ್ಥರಾದ ಶಿವಯೋಗಿ ಹಾಗೂ ಸುನೀಲ ಎಂಬುವರೊಂದಿಗೆ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಶ್ರೀಶೈಲನ ಮನೆಗೆ ತೆರಳಿದ್ದ. ನಾಲ್ವರೂ ಸಂಬಂಧಿಕರು. ಆಸ್ತಿ ವಿಷಯವಾಗಿ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮೂವರೂ ತನ್ನ ಮೇಲೆ ಹಲ್ಲೆ ಮಾಡುವ ಸುಳಿವು ಅರಿತ ಶ್ರೀಶೈಲ, ಪರವಾನಗಿ ಇರುವ ತನ್ನ ರಿವಾಲ್ವರ್​ನಿಂದ 3 ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಒಂದು ಗುಂಡು ಶಿವಯೋಗಿಯ ಹೊಟ್ಟೆಗೆ ತಾಗಿದ್ದರಿಂದ ಆತ ತೀವ್ರ ಗಾಯಗೊಂಡನು. ಬಳಿಕ ಮತ್ತೆರಡು ಗುಂಡು ಹಾರಿಸಿದ್ದು, ಸುನೀಲ ಹಾಗೂ ಈರಪ್ಪನಿಗೆ ತಾಗಿ ಗಾಯಗೊಂಡಿದ್ದಾರೆ. ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದರು. ತೀವ್ರ ಗಾಯಗೊಂಡಿದ್ದ ಶಿವಯೋಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆರೋಪಿ ಶ್ರೀಶೈಲನನ್ನು ಶಹರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net