ಮಧುರ ಕಾವ್ಯ ಸಿನಿಮಾ 21ಕ್ಕೆ ತೆರೆಗೆ

IMG-20230713-WA0071.jpg
Published on

ದಾವಣಗೆರೆ: ನಾಟಿ ವೈದ್ಯ ಮಧುಸೂದನ್ ಕ್ಯಾತನಹಳ್ಳಿ ನಿರ್ಮಾಣದ ಮಧುರ ಕಾವ್ಯ ಚಿತ್ರವು ಜುಲೈ 21ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಗ್ರಾಮೀಣ ಭಾಗದಲ್ಲಿ ನಾಟಿ ವೈದ್ಯರ ಕುಟುಂಬವೊಂದು ಮೆಡಿಕಲ್ ಲಾಬಿಯ ವಿರುದ್ಧ ಹೋರಾಡುವ ದೇಸಿಯ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದೆ ಎಂದು ಚಿತ್ರದ ನಿರ್ದೇಶಕ, ನಾಯಕ ನಟರೂ ಆಗಿರುವ ಮದುಸೂಧನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಿಂದಿನ ಕಾಲದಲ್ಲಿ ನಾಟಿ ವೈದ್ಯ ಪದ್ಧತಿ ಜನಪ್ರಿಯವಾಗಿತ್ತು. ಆದರೆ, ಈಗ ನಾಟಿ ವೈದ್ಯ ಪದ್ಧತಿ ಅಲೋಪಥಿ ಹತ್ತಿಕ್ಕುತ್ತಿದೆ. ನಾಟಿ ವೈದ್ಯರನ್ನು ತುಳಿಯಲಾಗುತ್ತಿದ್ದು, ತಲತಲಾಂತರದಿಂದ ಬಂದ ಪಾರಂಪರಿಕ ಆಯುರ್ವೇದ ವೈದ್ಯಕೀಯ ಪದ್ಧತಿ ಬೆಳೆಸಿ ರಕ್ಷಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ನೈಜ ಎಳೆಯನ್ನಿಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ ಎಂದು ಹೇಳಿದರು. ಚಿತ್ರದಲ್ಲಿ ನಾಯಕಿ ಪಾತ್ರವಿಲ್ಲ. ಆದರೆ, ತಾಯಿ ಮಗನ ಮಧುರ ಬಾಂಧವ್ಯವಿದೆ. ಉಡುಪಿ, ಮಂಗಳೂರು, ಶಿರಸಿ, ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಯಶೋದಾ, ರಾಜಕುಮಾರ್ ನಾಯಕ್, ಅಣ್ಣಪ್ಪಸ್ವಾಮಿ, ಜಗನ್ನಾಥ ಶೆಟ್ಟಿ, ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸತೀಶ್ ಮೌರ್ಯ ಸಂಗೀತ ಹಾಗೂ ಉದಯ ಭಾಸ್ಕರ್ ಛಾಯಾಗ್ರಹಣ ನೀಡಿದ್ದಾರೆ. ಸುಮಾರು 70 ಥೇಟರ್‌ಗಳಲ್ಲಿ ಚಿತ್ರವು ಬಿಡುಗಡೆಯಾಗಲಿದೆ ಎಂದರು. ಸಂಗೀತ ನಿರ್ದೇಶಕ ಸತೀಶ್ ಮೌರ್ಯ ಮಾತನಾಡಿ, ಚಿತ್ರದ ನಾಲ್ಕು ಹಾಡುಗಳು ಮಧುರವಾಗಿವೆ. ಸಂಗೀತ ನಿರ್ದೇಶಕ ವಿ. ಮನೋಹರ್ ಆಡಿಯೋ ರಿಲೀಸ್ ಹಾಗೂ ಹಿರಿಯ ನಟ ದೇವರಾಜ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು. ಅಣ್ಣಪ್ಪಸ್ವಾಮಿ, ರಾಜಕುಮಾರ್ ನಾಯಕ್ ಸುದ್ದಿಗೋಷ್ಠಿಯಲ್ಲಿದ್ದರು. ------ ಸರ್ಕಾರಗಳು ಆಯುರ್ವೇದದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು, ಗಿಡಮೂಲಿಕೆಯ ನಾಟಿ ವೈದ್ಯ ಪದ್ಧತಿ ಕುರಿತು ಪಠ್ಯಗಳಲ್ಲಿ ಅಳವಡಿಸಬೇಕು, ಮಕ್ಕಳು ಇದನ್ನು ತಿಳಿಯುವುದರಿಂದ ಸಮಾಜಕ್ಕೆ ತುಂಬಾ ಒಳ್ಳೆಯದಾಗಲಿದೆ. ಮದುಸೂದನ್, ಚಿತ್ರ ನಿರ್ದೇಶಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net