ಮಧುಮೇಹಕ್ಕೆ ಭಯಪಡುವ ಅಗತ್ಯವಿಲ್ಲ: ಡಾ.ಹರೀಶ್

ಮಧುಮೇಹಕ್ಕೆ ಭಯಪಡುವ ಅಗತ್ಯವಿಲ್ಲ: ಡಾ.ಹರೀಶ್
Published on


ಚನ್ನರಾಯಪಟ್ಟಣ: ಯೋಗಾ, ಧ್ಯಾನ ಹಾಗೂ ಕಾಲ್ನೆಡುಗೆ ಜತೆಗೆ ಮಿತ ಆಹಾರ ಪದ್ಧತಿಯನ್ನು ಸರಿಯಾಗಿ ಅನುಸರಿಸಿದ್ದಲ್ಲಿ ಮಧುಮೇಹ ಕಾಯಿಲೆಗೆ ಭಯಪಡುವ ಅಗತ್ಯವಿಲ್ಲ ಎಂದು ಕಲ್ಕೆರೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹರೀಶ್ ಹೇಳಿದರು.


ಪಟ್ಟಣದ ಶಾಲಿನಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಧುಮೇಹ ಹಾಗೂ ಯೋಗಾ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ಯೋಗಾ ದಿನಾಚರಣೆ ಹಾಗೂ ಆರೋಗ್ಯ ತಪಾಸನಾ ಶಿಬಿರದಲ್ಲಿ ಮಾತನಾಡಿದರು.


ಜತೆಗೆ ವೈದ್ಯರ ಸಲಹೆ ಅಗತ್ಯವಿದ್ದು ಮೂರು ತಿಂಗಳಿಗೊಮ್ಮೆ ಮಧುಮೇಹ ಸೇರಿದಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಆದರೆ ಇತ್ತೀಚಿನ ದಿನಗಳಲ್ಲಿ ಮಧುಮೇಹದ ಬಗ್ಗೆ ನಿರ್ಲಕ್ಷಿಸುತ್ತಿರುವ ಕೆಲವರು ಸರಿಯಾದ ಕ್ರಮ ಅನುಸರಿಸದೆ ಕಾಯಿಲೆಯನ್ನು ತೀರ್ವ ಸ್ಥಿತಿಗೆ ತಂದುಕೊಳ್ಳುತಿದ್ದಾರೆ ಎಂದರು.


ಯೋಗಾ ಗುರುಗಳಾದ ಲಕ್ಷ್ಮಣ್ ಗುರೂಜಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಯೋಗಾ ಪದ್ಧತಿ ಇತ್ತೀಚಿನ ದಿನಗಳಿಂದ ಪ್ರಸಿದ್ದಿ ಪಡೆಯುತಿದ್ದು ಶೇ.40 ರಷ್ಟು ಜನ ಆರೋಗ್ಯದ ಸಲುವಾಗಿ ಯೋಗಾದತ್ತ ಮುಖ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು.


ಕರೋನಾ ಮಹಾಮಾರಿ ಬಂದಮೇಲೆ ಆರೋಗ್ಯವನ್ನು ಸದೃಡಪಡಿಸಿಕೊಳ್ಳುವ ಸಲುವಾಗಿ ವಿಶ್ವದೆಲ್ಲೆಡೆ ಹಿಂದೂಸ್ಥಾನ ಮೂಲದ ಯೋಗಾ ಪದ್ಧತಿ ಅನುಸರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಶ್ರದ್ಧೆ ಹಾಗೂ ಭಕ್ತಿಯೊಂದಿಗೆ ಯೋಗಾ ಹಾಗೂ ಧ್ಯಾನದಲ್ಲಿ ತೊಡಗಿದಲ್ಲಿ ಆರೋಗ್ಯ ವೃದ್ಧಿಸಿಕೊಳ್ಳುವುದು ಕಷ್ಟವೇನಲ್ಲ ಎಂದು ತಿಳಿಸಿದರು.


ಯೋಗಾ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರೆ 75 ಮಂದಿ ಮಧುಮೇಹ ತಪಾಸಣೆಗೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷೆ ಎಚ್.ಆರ್.ಮಮತಾ, ಕಾರ್ಯದರ್ಶಿ ಬಿ.ವಿ.ವಿಜಯ್, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಪ್ರಮುಖರಾದ ಡಾ.ಸಿ.ಎಲ್.ನವೀನ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net