ಮಧುಮೇಹ  ಸಮಸ್ಯೆಗಳ ನಿಯಂತ್ರಣ ಅಗತ್ಯ

14 CRP-1A,
Published on

ಡಾ.ನಾಗೇಶ್ ಅಭಿಮತ- ಜಾಗೃತಿ ಜಾಥಾ

 ಚನ್ನರಾಯಪಟ್ಟಣ : ಜಗತ್ತಿನಲ್ಲಿ ಮಧುಮೇಹದ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಡಾ.ನಾಗೇಶ್ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ನಾಗೇಶ್ ಆಸ್ಪತ್ರೆ ಹಾಗೂ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಮಧುಮೇಹ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಧುಮೇಹ 2009ರಲ್ಲಿ ಶೇ. 7.1ರಷ್ಟಿತ್ತು. 2019ರ ವೇಳೆಗೆ ಅದು ಶೇ.8.9ಕ್ಕೆ ಏರಿತ್ತು. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ ವರದಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 20ರಿಂದ 77 ವರ್ಷ ವಯಸ್ಸಿನ 7.7 ಕೋಟಿ ಜನ ಮಧುಮೇಹದ ಸಮಸ್ಯೆ ಹೊಂದಿದ್ದಾರೆ. 2045ರ ವೇಳೆಗೆ ಇದು 13.42 ಕೋಟಿಗೆ ಏರಿಕೆಯಾಗಲಿದೆ. ಮಧುಮೇಹ ಮತ್ತು ಅದರಿಂದ ಸಂಭವಿಸುವ ಇತರ ಸಮಸ್ಯೆಗಳ ಅಸಮರ್ಪಕ ನಿರ್ವಹಣೆ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಎಡವುತ್ತಿರುವುದರಿಂದಲೇ ದೇಶದಲ್ಲಿ ಹೆಚ್ಚಿನ ಜನರ ಆರೋಗ್ಯ ಅಪಾಯಕ್ಕೆ ಸಿಲುಕುತ್ತಿರುವುದಾಗಿ ಅಧ್ಯಯನ ವರದಿಗಳು ಹೇಳುತ್ತಿವೆ ಎಂದರು.

ಒತ್ತಡದ ಜೀವನದಲ್ಲಿ ಮಧುಮೇಹದಂತಹ ಸಮಸ್ಯೆಗಳ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಸಮಯ ಮೀಸಲಿಡುವುದನ್ನು ಮರೆಯುವಂತಿಲ್ಲ. ಮಧುಮೇಹವು ಸೂಕ್ಷ್ಮ ರಕ್ತನಾಳಗಳು ಮತ್ತು ದೊಡ್ಡ ರಕ್ತನಾಳಗಳ ಮೇಲೆ ಹಾನಿ ಉಂಟು ಮಾಡುತ್ತದೆ. ಸೂಕ್ಷ್ಮ ರಕ್ತನಾಳಗಳ ಮೇಲೆ ಅದು ಉಂಟು ಮಾಡುವ ಹಾನಿಯು ನರರೋಗ, ಮೂತ್ರಕೋಶ ಸಂಬಂಧಿ ರೋಗ ಮತ್ತು ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ದೊಡ್ಡ ರಕ್ತನಾಳಗಳ ಮೇಲೆ ಮಧುಮೇಹವು ಉಂಟು ಮಾಡುವ ಪರಿಣಾಮಗಳು ಹೃದಯಾಘಾತವೂ ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗುತ್ತವೆ ಎಂದರು.

ಮಧುಮೇಹದ ಪರಿಣಾಮಗಳ ಸ್ಪಷ್ಟವಾದ ಅರಿವು ಇಲ್ಲದೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವ ಕಾರಣದಿಂದಾಗಿಯೇ ಹೆಚ್ಚು ಜನರ ಜೀವ ಅಪಾಯಕ್ಕೆ ಸಿಲುಕುತ್ತಿದೆ. ನಿರಂತರವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣದ ತಪಾಸಣೆ, ನಿಯಮಿತವಾಗಿ ಔಷಧ ಸೇವನೆ, ಆಹಾರ ಕ್ರಮ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಯ ಮೂಲಕ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಿದರು.

ನಿಯಮಿತವಾಗಿ ರಕ್ತಪರೀಕ್ಷೆ ಮಾಡಿಸಿಕೊಂಡರೆ ದೀರ್ಘಾವಧಿಯ ದತ್ತಾಂಶಗಳೊಂದಿಗೆ ನಿರ್ವಹಣೆ ಇನ್ನಷ್ಟು ಸುಲಭವಾಗುತ್ತದೆ. ಮಧುಮೇಹದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿ ಆಹಾರ ಕ್ರಮ ಹಾಗೂ ದೈಹಿಕ ಚಟುವಟಿಕೆಗಳ ಪಾತ್ರವೂ ದೊಡ್ಡದು. ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶಗಳುಳ್ಳ ಪದಾರ್ಥಗಳು, ಕಡಿಮೆ ಪ್ರಮಾಣದ ಕೊಬ್ಬಿನಾಂಶ ಇರುವ ಪ್ರೋಟೀನ್ ಮತ್ತು ಆರೋಗ್ಯಕಾರಿ ಕೊಬ್ಬು ಒಳಗೊಂಡ ಸಮ ತೂಕದ ಆಹಾರ ಸೇವನೆಯಿಂದ ಹೆಚ್ಚು ಅನುಕೂಲವಿದೆ. ನಡಿಗೆ, ಮಾಂಸಖಂಡಗಳನ್ನು ಬಲಪಡಿಸುವ ಕಸರತ್ತುಗಳೂ ಸೇರಿದಂತೆ ಏರೋಬಿಕ್ ಚಟುವಟಿಕೆಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಪೂರಕ. ಮಧುಮೇಹ ಸಮಸ್ಯೆ ಇರುವವರು ಮಾತ್ರೆ ಅಥವಾ ಇನ್ಸುಲಿನ್ ಪಡೆಯಬೇಕೆಂದು ವೈದ್ಯರು ಸೂಚಿಸಿದಲ್ಲಿ, ಅವುಗಳನ್ನು ಸರಿಯಾಗಿ ಪಾಲಿಸುವುದು ಕಡ್ಡಾಯ. ಆದರೆ, ಜಾಗೃತಿಯ ಕೊರತೆಯಿಂದಲೇ ಹೆಚ್ಚು ಮಂದಿ ಅದರ ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ. ನ. 14ರಂದು ವಿಶ್ವ ಮಧುಮೇಹ ದಿನ. ಈ ಹೊತ್ತಿನಲ್ಲಿ ಮಧುಮೇಹದ ಪರಿಣಾಮಗಳು, ಅದರ ನಿಯಂತ್ರಣ, ನಿರ್ವಹಣೆ ಕುರಿತು ಜನಸಾಮಾನ್ಯರಲ್ಲಿ ವೈಜ್ಞಾನಿಕವಾಗಿ ಅರಿವು ಮೂಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಿದೆ ಎಂದು ತಿಳಿಸಿದರು.

ಮಧುಮೇಹ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿ ತಹಸೀಲ್ದಾರ್ ವಿ.ಎಸ್.ನವೀನ್ ಕುಮಾರ್, ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿನ ಅತಿಯಾದ ಏರಿಕೆಯಿಂದ ಮಧುಮೇಹ ಬರುತ್ತದೆ. ಇದು ಮನುಷ್ಯರನ್ನು ದೀರ್ಘಕಾಲ, ನಿರಂತರವಾಗಿ ತೀವ್ರತರವಾಗಿ ಕಾಡುವ ಸಮಸ್ಯೆಯಾಗಿದ್ದು, ಬಹು ಅಂಗಾಂಗಗಳಿಗೆ ಹಾನಿ ಮಾಡುವ ಅಪಾಯವನ್ನು ಹೊಂದಿದೆ. ದೇಶದ ಜನರಲ್ಲಿ ಈ ಕುರಿತು ಅರಿವಿನ ಕೊರತೆ ಇದೆ. ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆ ಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಅರಿವು ಮೂಡಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಮಧುಮೇಹದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಮಧುಮೇಹ ತಡೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಘೋಷಣಾ ಫಲಕಗಳನ್ನು ಹಿಡಿದು ಪಟ್ಟಣದ ಬೀದಿಗಳಲ್ಲಿ ಸಾಗಿ ಜನರನ್ನು ಜಾಗೃತಿಗೊಳಿಸಿದರು.

ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತಿ ನಾಗೇಶ್, ಪ್ರಾಂಶುಪಾಲೆ ಆರ್.ಜೆ.ವಿದ್ಯಾರಾಣಿ, ಆಸ್ಪತ್ರೆಯ ವ್ಯವಸ್ಥಾಪಕ ಎನ್.ಜಿ.ಕೇಶವಮೂರ್ತಿ, ಆಡಳಿತ ವಿಭಾಗದ ಸಿಬ್ಬಂದಿ ಉಮೇಶ್, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net