

ಬೆಳಗಾವಿ: ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ಮಧುಮೇಹವು ಆವರಿಸಿಕೊಳ್ಳುತ್ತಿದ್ದು, ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಇನ್ಸುಲಿನ್ ವಿತರಣೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, 22 ವರ್ಷಗಳಿಂದ ಮಧುಮೇಹ ಪೀಡಿತ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವುದು ಐತಿಹಾಸಿಕ ಕಾರ್ಯ ಎಂದರು.
ನಮ್ಮ ಆಹಾರ ಮತ್ತು ಜಡತ್ವ ಜೀವನ ಶೈಲಿಯಿಂದ ಮಧುಮೇಹ ಆವರಿಸಿಕೊಳ್ಳುತ್ತಿದೆ. ಹಸುಗೂಸಿಗೂ ಮಧುಮೇಹದ ಜತೆಗೆ ಸಕಲ ತಪಾಸಣೆ ಮಾಡುವ ಪದ್ಧತಿ ಬಂದಿದೆ. ಚಿಕ್ಕ ಮಕ್ಕಳಿಗೆ ಚಿಕಿತ್ಸೆ ದುಬಾರಿಯಾಗಿ ಪರಿಣಮಿಸುತ್ತಿದ್ದು, ಮಧುಮೇಹ ಪೀಡಿತ ಮಕ್ಕಳ ಚಿಕಿತ್ಸಾ ವೆಚ್ಚ ನಿರಂತರವಾಗಿರುತ್ತದೆ. ಆದ್ದರಿಂದ ಕೈಗೆಟುಕುವ ದರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಅತ್ಯಂತ ಶ್ರಮಜೀವಿಯಾದ ರೈತನಿಗೂ ಕೂಡ ಮಧುಮೇಹ ಬಂದೆರಗುತ್ತಿದೆ. ಇದಕ್ಕೆಲ್ಲ ಕಾರಣ ಆಹಾರ ಪದ್ಧತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಆಸ್ಪತ್ರೆ ಇಲ್ಲದ ಸಂದರ್ಭದಲ್ಲಿ ನಾವು ಒಂದೇ ಸೂರಿನಡಿ 2400 ಹಾಸಿಗೆ, ಬೆಳಗಾವಿ ದಕ್ಷಿಣ ಭಾಗದಲ್ಲಿ 500, ಚಿಕ್ಕೋಡಿ, ಹುಬ್ಬಳ್ಳಿ ಸೇರಿ 4,000 ಹಾಸಿಗೆಯ ಆಸ್ಪತ್ರೆ ತೆರೆಯಲಾಗಿದೆ. ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ. ಕೆಎಲ್‌ಇ ಸಂಸ್ಥೆಯು ದಾನಿಗಳಿಂದ ನಡೆದಿದೆ. ದಾನವು ಬಡವರಿಗೆ ಮುಟ್ಟುತ್ತದೆ ಎಂಬ ಭಾವನೆಯಿಂದ ಜನರು ಸಂಸ್ಥೆಗೆ ದಾನ ನೀಡುತ್ತಿದ್ದಾರೆ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮಧುಮೇಹ ತಜ್ಞವೈದ್ಯ ಡಾ.ಎಂ.ವಿ.ಜಾಲಿ ಮಾತನಾಡಿ, 22 ವರ್ಷಗಳ ಹಿಂದೆ ಇಲ್ಲಿಗೆ ಕರೆ ತಂದು ಜವಾಬ್ದಾರಿ ನೀಡಿ, ಕೆಎಲ್‌ಇ ಮಧುಮೇಹ ಕೇಂದ್ರ ತೆರೆಯಲು ಪ್ರೇರೇಪಿಸಿ ಇಂದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಹೆಸರು ಗಳಿಸಲು ಸದಾ ಬೆನ್ನೆಲಬಾಗಿ ಡಾ.ಪ್ರಭಾಕರ ಕೋರೆ ಅವರು ಕಾರ್ಯ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು. ಮಧುಮೇಹ ಕೇಂದ್ರದ ಡಾ.ಸುಜಾತಾ ಜಾಲಿ ಮಾತನಾಡಿ, ಕೇಂದ್ರದ ಕಾರ್ಯ ಗಮನಿಸಿ, ಆಸ್ಟ್ರೇಲಿಯಾದ ಸಂಸ್ಥೆಯು ಇನ್ಸುಲಿನ್ ನೀಡಿದ್ದು, ಎಲ್ಲ ಮಕ್ಕಳಿಗೆ ಉಚಿತವಾಗಿ ಪೂರೈಸಲು ಕ್ರಮಕೈಕೊಳ್ಳಲಾಗಿದೆ. ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಮಕ್ಕಳು ಇನ್ಸುಲಿನ್ ಪಡೆಯಲು ತೊಂದರೆಯಾಗುತ್ತಿತ್ತು. ಅದನ್ನು ತಪ್ಪಿಸಲು ನಾವು ಕ್ರಮಕೈಕೊಂಡಿದ್ದು, ಶೇ.75 ಮಕ್ಕಳು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಕೆಎಲ್‌ಇ ಮಧುಮೇಹ ಕೇಂದ್ರವು 59 ದೇಶಗಳಲ್ಲಿಯೇ ಅತ್ಯುತ್ತಮ ಆರೈಕಾ ಪ್ರಥಮ ಶ್ರೇಣಿಯ ಕೇಂದ್ರವಾಗಿ ಹೊರಮ್ಮಿದೆ ಎಂದರು.
ಚಿಕ್ಕ ಮಕ್ಕಳ ತಜ್ಞವೈದ್ಯ ಡಾ.ವಿ.ಡಿ.ಪಾಟೀಲ, ಡಾ. ತನ್ಮಯಾ ಮೆಟಗುಡ್ಡ, ಡಾ. ಸಂತೋಷ ಪಾಟೀಲ, ಡಾ. ಸಂಜಯ ಕಂಬಾರ, ಡಾ. ರಾಜೇಂದ್ರ ದೇಗಿನಾಳ, ಡಾ.ಪ್ರಾಚಿ ನಲವಾಡೆ, ಡಾ. ಜ್ಯೋತಿ ವಸೆದಾರ ಇತರರಿದ್ದರು.