

ಮೈಸೂರು: ಮಧುಮೇಹದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದತ್ತಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರುನಗರದ ಗಣಪತಿ ಸಚ್ಚಿದಾನಂದ ಆಶ್ರಮದಿಂದ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿದರು.
ದತ್ತ ಪೀಠಾಧಿಪತಿ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಶ್ರೀಗಳು ಪಾದಯಾತ್ರೆ ಕೈಗೊಂಡರು. ಶ್ರೀಗಳೊಂದಿಗೆ ನೂರಾರು ಭಕ್ತರು ಕೂಡ ಪಾದಯಾತ್ರೆಯಲ್ಲಿ ಸಾಗಿದರು. ಶ್ರೀಕಂಠೇಶ್ವರಸ್ವಾಮಿ ಸನ್ನಿಧಿಯನ್ನು ತಲುಪಿದ ಕೂಡಲೇ ದೇವರಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಶ್ರೀಗಳು ನೆರವೇರಿಸಿ ನಂತರ ಮಹಾಮಂಗಳಾರತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಮಧುಮೇಹ ಬಹಳಷ್ಟು ಜನರನ್ನು ಕಾಡುತ್ತಿದೆ. ಅದಕ್ಕಾಗಿ ಜನರಲ್ಲಿ ಅರಿವು ಮೂಡಿಸಲು ಈ ಪಾದಯಾತ್ರೆ ಕೈಗೊಳ್ಳಲಾಯಿತು. ಸಕ್ಕರೆ ಕಾಯಿಲೆ ಕುರಿತು ಜನರಲ್ಲಿ ಅರಿವು ಅಗತ್ಯವಾಗಿದೆ. ಪ್ರತಿದಿನ ಎಲ್ಲರೂ ಯಾವುದಾದರೂ ಒಂದು ವ್ಯಾಯಾಮ ಮಾಡಬೇಕು. ಉತ್ತಮ ಸಮಾಜಕ್ಕಾಗಿ ನಾವೆಲ್ಲ ಕೃಷಿ ಮಾಡಬೇಕು ಎಂದರು.
ಪ್ರತಿಯೊಬ್ಬ ಮನುಷ್ಯನ ಉತ್ತಮ ಆರೋಗ್ಯಕ್ಕೆ ಕಾಲ್ನಡಿಗೆ ಅತ್ಯುತ್ತಮ ವ್ಯಾಯಾಮ. ಈ ಕುರಿತು ಜನ ಜಾಗೃತಿ ಮೂಡಿಸುವ ಸಲುವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದಕ್ಕೆ ಭಕ್ತರು ಸಹ ಸಾಥ್ ನೀಡಿದರು. ಪ್ರತಿದಿನ ಜನರು ತಾವಿರುವ ಜಾಗದಲ್ಲೇ ಯಾವುದಾದರೂ ಆಶ್ರಮ ಅಥವಾ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿ ಪ್ರದಕ್ಷಿಣೆ ಹಾಕಬೇಕು. ಇದರಿಂದ ಭಕ್ತಿ ಹೆಚ್ಚಾಗುತ್ತದೆ. ಉತ್ತಮ ಆರೋಗ್ಯ ಪಡೆಯಬಹುದು. ದೇವರ ದರ್ಶನ ಮಾಡುವುದು ಪ್ರದಕ್ಷಿಣೆ ಹಾಕುವುದು ನಮ್ಮ ಸನಾತನ ಧರ್ಮದ ಸಂಪ್ರದಾಯವೂ ಆಗಿದೆ. ಆದ್ದರಿಂದ ಮಕ್ಕಳಿಗೂ ಪ್ರದಕ್ಷಿಣೆ ಮಾಡುವುದನ್ನು ಕಲಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಧರ್ಮ ಮಾರ್ಗದಲ್ಲಿ ನಡೆಯಲು ಬೇಕಾದ ಆರೋಗ್ಯ ದಯಪಾಲಿಸು, ನಮಗೆ ಬೇಕಾದ ಉತ್ತಮ ಬುದ್ಧಿ, ಒಳ್ಳೆಯ ಆರೋಗ್ಯ ಅನುಗ್ರಹಿಸು ಎಂದು ಸ್ವಾಮಿ ಶ್ರೀಕಂಠೇಶ್ವರ ದೇವರ ಬಳಿ ಪ್ರಾರ್ಥಿನೆ ಮಾಡಿಕೊಂಡಿರುವುದಾಗಿ ತಿಳಿಸಿದರು.