ಮಧುಗಿರಿ: ಮಧುಗಿರಿಯಿಂದ ನೇರವಾಗಿ ಬೆಂಗಳೂರಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬ ತಾಲೂಕಿನ ಜನತೆಯ ಹಲವಾರು ವರ್ಷಗಳ ಬೇಡಿಕೆಗೆ ಮನ್ನಣೆ ದೊರೆತಿದ್ದು, ಮಧುಗಿರಿ ಕೆಎಸ್ಆರ್ಟಿಸಿ ಡಿಪೋದಿಂದ ಬೆಂಗಳೂರಿಗೆ ನೇರವಾಗಿ ನೂತನ ಬಸ್ ಮಾರ್ಗ ಕಲ್ಪಿಸಿದೆ. ಮಧುಗಿರಿಯಲ್ಲಿ ಡಿಪೋ ಪ್ರಾರಂಭವಾದರೂ ಬೆಂಗಳೂರಿಗೆ ಯಾವುದೇ ನೇರ ಬಸ್ ಸೌಕರ್ಯವಿರಲಿಲ್ಲ. ಪಾವಗಡದಿಂದ ಬೆಂಗಳೂರಿಗೆ ಸಂಚರಿಸುವ ಬಸ್ಗಳು ಮಧುಗಿರಿ ಮಾರ್ಗವಾಗಿ ಹೋಗುತ್ತಿದ್ದು, ಬಹಳಷ್ಟು ಬಸ್ಗಳು ಪಾವಗಡದಲ್ಲೇ ಭರ್ತಿಯಾಗುತ್ತಿದ್ದವು. ಇದರಿಂದ ಮಧುಗಿರಿಯ ಜನತೆ ಬೆಂಗಳೂರಿಗೆ ಪ್ರಯಾಣ ಮಾಡಬೇಕೆಂದರೆ ಯಾವುದೇ ಸೀಟ್ಗಳು ದೊರೆಯದೇ ಸುಮಾರು 4 ಗಂಟೆಗಳ ಕಾಲ ನೂಕು-ನುಗ್ಗಲಿನಲ್ಲಿ ನಿಂತುಕೊಂಡು, ಬಸ್ಗಳ ಡೋರ್ ಬದಿ ನಿಂತು ಓಲಾಡಿಕೊಂಡು ಬೆಂಗಳೂರು ತಲುಪುವ ವೇಳೆಗೆ ಹೈರಣಾಗುತ್ತಿದ್ದರು. ಮಹಿಳೆಯರು, ಮಕ್ಕಳು ಮತ್ತು ವೃದ್ಧರೂ ಇದಕ್ಕೆ ಹೊರತಾಗಿರಲಿಲ್ಲ. ಇದರಿಂದಾಗಿ ಮಧುಗಿರಿ ತಾಲೂಕಿನ ಜನತೆ ತೊಂದರೆ ಅನುಭವಿಸಿದ್ದರು.
ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರ ಉದ್ಘಾಟನೆಗೆ ಬೆಳಗ್ಗೆ ಮಧುಗಿರಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಆಗಮಿಸಿದ್ದ ಸಂದರ್ಭದಲ್ಲಿ ಮಧುಗಿರಿಯ ಜನತೆ ಬೆಂಗಳೂರು ಬಸ್ಗಾಗಿ ಗಂಟೆಗಟ್ಟಲೆ ಕಾಯಬೇಕಿದ್ದ ಪರಿಸ್ಥಿತಿ ಗಮನಿಸಿ, ಸಾರ್ವಜನಿಕರ ಬಳಿ ಮಾಹಿತಿ ಪಡೆದು, ಇದನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳಿಗೆ ಬಸ್ ಸೌಕರ್ಯ ಕಲ್ಪಿಸಲು ಸೂಚನೆ ನೀಡಿದ್ದರು. ಮಧುಗಿರಿಯಿಂದ ಬೆಂಗಳೂರಿಗೆ ನೇರ ಬಸ್ ಸೌಕರ್ಯ ಕಲ್ಪಿಸಿದ್ದು, ಸಚಿವ ರಾಜಣ್ಣ ಅವರಿಗೆ ಕ್ಷೇತ್ರದ ಜನತೆ ಧನ್ಯವಾದ ಸಲ್ಲಿಸಿದ್ದಾರೆ.
ಈಗ ಮಧುಗಿರಿಯಿಂದ ಬೆಂಗಳೂರಿಗೆ ಪ್ರಯಾಣಿಸುವವರು ಪಾವಗಡ ಬಸ್ಗಳಿಗೆ ಅವಲಂಬಿತರಾಗದೆ, ನೇರವಾಗಿ ಮಧುಗಿರಿ ಬಸ್ಗಳಿಂದಲೇ ಪ್ರಯಾಣಿಸಬಹುದಾಗಿದೆ. ಸಾರಿಗೆ ಇಲಾಖೆಯು ಮಧುಗಿರಿಗೆ ಹೆಚ್ಚುವರಿ ನೂತನ ಬಸ್ ವ್ಯವಸ್ಥೆ ಕಲ್ಪಿಸಿದ್ದು ಮಧುಗಿರಿ ಜನತೆಯ ಸಂಚಾರ ಸುಗಮಗೊಳಿಸಿದೆ.
ಮಾರ್ಗದ ವಿವರ:ಮಧುಗಿರಿಯಿಂದ ಬೆಂಗಳೂರು ಕಡೆಗೆ ಬೆಳಗ್ಗೆ 4.30ಕ್ಕೆ, 5 ಗಂಟೆಗೆ ಮತ್ತು ಮಧ್ಯಾಹ್ನ 3.15 ಮತ್ತು 4.15ಕ್ಕೆ ಮಧುಗಿರಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರಡಲಿದೆ. ಬೆಂಗಳೂರಿನಿಂದ ಮಧುಗಿರಿಯ ಕಡೆಗೆ ಬೆಳಗ್ಗೆ 7.15ಕ್ಕೆ, 8.15ಕ್ಕೆ ಸಂಜೆ 6.35ಕ್ಕೆ ಮತ್ತು 7ಗಂಟೆಗೆ ಬೆಂಗಳೂರು ಬಸ್ ನಿಲ್ದಾಣದಿಂದ ಹೊರಡಲಿದ್ದು, ಸಾರ್ವಜನಿಕರು ಈ ಸಾರಿಗೆ ಸೌಲಭ್ಯ ಪಡೆದುಕೊಳ್ಳಬಹುದುಎಂದು ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.