ಮಧುಗಿರಿಯ ಮಂಡರ ಕಾಲನಿಯಲ್ಲಿ ಉದ್ಘಾಟನೆಗೆ ಸಜ್ಜಾದ ಹೈಟೆಕ್ ಅಂಗನವಾಡಿ ; ಗೋಡೆಗಳ ಮೇಲೆ ಬಣ್ಣಗಳ ಚಿತ್ತಾರ

09 MDG 01 Photo
Published on

ಮಧುಗಿರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕಿನಲ್ಲಿ ವಿನೂತನ ವಾದರಿಯ ಹೈಟೆಕ್ ಅಂಗನವಾಡಿ ಕೇಂದ್ರಗಳ ನಿರ್ವಾಣಕ್ಕೆ ಮುನ್ನುಡಿ ಬರೆದಿದೆ. ಪಟ್ಟಣದ ಮಂಡರ ಕಾಲನಿಯಲ್ಲಿ ನಿರ್ಮಿಸಿರುವ ಈ ಅಂಗನವಾಡಿ ಕೇಂದ್ರ ೆ.16ರಂದು ಉದ್ಘಾಟನೆಗೆ ಸಜ್ಜಾಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿದೆ. ಅಲ್ಲದೇ ತಾಲೂಕಿನ ಹಲವೆಡೆ ಹೈಟೆಕ್ ಅಂಗನವಾಡಿಗಳು ನಿರ್ಮಾಣವಾಗುತ್ತಿವೆ.

ಪಟ್ಟಣದ ಪುರಸಭಾ ವ್ಯಾಪ್ತಿಯ ಬಹಳಷ್ಟು ಬಡಜನರಿರುವ ಮಂಡರ ಕಾಲನಿಯಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುವಾರು 16.50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಿದ್ದು, ಇದು ಪಟ್ಟಣದ ಮೊದಲ ಹೈಟೆಕ್ ಅಂಗನವಾಡಿ ಕೇಂದ್ರವಾಗಿದೆ.

ಏನಿದೆ ವಿಶೇಷ?: ಪಟ್ಟಣದಲ್ಲಿ ಸುವಾರು 25 ಅಂಗನವಾಡಿ ಕೇಂದ್ರಗಳಿದ್ದು, ಬಹುತೇಕ ಅಂಗನವಾಡಿಗಳು ಬಾಡಿಗೆ ಕೊಠಡಿಗಳಲ್ಲಿ ನಡೆಯುತ್ತಿವೆ. ಮಂಡರ ಕಾಲನಿಯಲ್ಲಿ ನಿರ್ಮಿಸಿರುವ ಕೇಂದ್ರದಲ್ಲಿ ವಿಶಾಲವಾದ ಹಾಲ್, ಅಡುಗೆ ಕೋಣೆ, ಸ್ಟೋರ್ ರೂಂ ಮತ್ತು ಕಾಂಪೌಂಡ್ ನಿರ್ಮಿಸಿರುವ ವಿಶಾಲವಾದ ಆಟದ ಮೈದಾನವಿದೆ.

ಅಂಗನವಾಡಿ ಕೇಂದ್ರದ ಗೋಡೆಗಳನ್ನು ವಿವಿಧ ಬಣ್ಣಗಳ ಚಿತ್ತಾರ ಅಲಂಕರಿಸಿದೆ. ವಿದ್ಯೆಯ ಅಧಿಪತಿ ವಿನಾಯಕ ಪೆನ್ಸಿಲ್ ಹಿಡಿದು ನಿಂತಿರುವ ಕಣ್ಮನ ಸೆಳೆಯುವ ಭಿತ್ತಿಚಿತ್ರ, ಮಕ್ಕಳ ಕಾರ್ಟೂನ್ ಸೇರಿ ವಿವಿಧ ಚಿತ್ತಾರಗಳು, ಇದಲ್ಲದೆ ಗೋಡೆಗಳಿಗೆ ಅಂಕಿಗಳು, ವಾರಗಳು, ಹಣ್ಣು, ತರಕಾರಿಗಳು, ಕಾಡು ಪ್ರಾಣಿಗಳ ಚಿತ್ರಗಳು, ತಿಂಗಳು, ಪ್ರಾಣಿಗಳ ಚಿತ್ರಗಳು, ಆಂಗ್ಲ ಭಾಷೆಯ ಕಲಿಕೆ ಸೇರಿ, ವರ್ಣ ವಾಲೆಯ ಪದ ಪುಂಜಗಳನ್ನೇ ಅರಳಿಸಿದ್ದು, ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಈ ವಾತಾವರಣ ಮಕ್ಕಳ ಕಲಿಕೆಗೆ ಹೇಳಿ ವಾಡಿಸಿದಂತಿದೆ.

ಎಲ್ಲೆಲ್ಲಿ ಅಂಗನವಾಡಿಗಳ ನಿರ್ಮಾಣ ?: ಕಂಬಯ್ಯನ ಪಾಳ್ಯ, ಕುಲುಮನಹಳ್ಳಿ, ಗುರ‌್ರಮ್ಮನಕಟ್ಟೆ, ಬಡವನಹಳ್ಳಿ 2 ಅಂಗನವಾಡಿ ಕೇಂದ್ರಗಳು, ಇಂದಿರಾ ಗ್ರಾಮ, ಟಿ.ತಾಂಡಾದಲ್ಲಿ ಸ್ಥಳೀಯ ಗ್ರಾಪಂಗಳ ಸಹಕಾರದಿಂದ ಹಾಗೂ ದೊಡ್ಡೇರಿಯಲ್ಲಿ 2 ಅಂಗನವಾಡಿ ಕೇಂದ್ರಗಳು, ಬಡಿಗೊಂಡನಹಳ್ಳಿ, ನಾರಪ್ಪನಹಳ್ಳಿ, ಮರಿತಿಮ್ಮನಹಳ್ಳಿ, ಪೋಲೇನಹಳ್ಳಿ, ಬೊಮ್ಮನಹಳ್ಳಿ, ಬಿ.ಎಂ ಪಾಳ್ಯ ಮತ್ತು ಮಿಡತರಹಳ್ಳಿಗಳಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಇಲಾಖೆ ವತಿಯಿಂದ ಒಟ್ಟು 14 ಹೈಟೆಕ್ ಮಾದರಿಯ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿದ್ದು, ಉದ್ಘಾಟನೆಗೆ ಸಿದ್ಧಗೊಳ್ಳುತ್ತಿವೆ. ಇದರಲ್ಲಿ 4 ಅಂಗನವಾಡಿ ಕೇಂದ್ರಗಳು ಉದ್ಘಾಟನೆಗೊಂಡು ಈಗಾಗಲೇ ಆರಂಭಿಸಲಾಗಿದೆ.

ಪಟ್ಟಣದ ಮಂಡರ ಕಾಲನಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿನೂತನ ವಾದರಿಯಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಿದ್ದು, ಗೋಡೆಗಳನ್ನು ಬಣ್ಣದ ಕಾರ್ಟೂನ್‌ಗಳಿಂದ ಅಲಂಕರಿಸಲಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ, ಆರೋಗ್ಯ ರಕ್ಷಣೆಯ ಜತೆಗೆ ಕಲಿಕೆಗೂ ಒತ್ತು ನೀಡಲಾಗುವುದು. ನಗರದಲ್ಲಿ ಇದೊಂದೇ ಸ್ವಂತ ಕಟ್ಟಡವಾಗಿದ್ದು, ಪುರಸಭೆ ಸಹಕಾರ ನೀಡಿದರೆ ಮತ್ತಷ್ಟು ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ಅನಿತಾ, ಸಿಡಿಪಿಒ ಮಧುಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net