

ಬೀದರ್: ಕಂಜಕ್ಟಿವೈಟಿಸ್ (ಮದ್ರಾಸ್ ಐ) ರೋಗ ಹರಡುವಿಕೆ ತಡೆಯಲು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಗ್ರಾಮ ವಿಕಾಸ ಟ್ರಸ್ಟ್ ಅಧ್ಯಕ್ಷ ಬಸವರಾಜ ಬಶೆಟ್ಟಿ ಹೇಳಿದರು.
ಆಣದೂರ ಗ್ರಾಮದ ಸರ್ವಜ್ಞ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗ್ರಾಮ ವಿಕಾಸ ಟ್ರಸ್ಟ್ ಏರ್ಪಡಿಸಿದ್ದ ಮದ್ರಾಸ್ ಐ ರೋಗ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ರಾಸ್ ಐ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ವ್ಯಾಪಕ ಹರಡುತ್ತಿದೆ. ರೋಗ ಲಕ್ಷಣ ಕಂಡುಬಂದ ತಕ್ಷಣ ವೈದ್ಯರನ್ನು ಕಾಣಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸರಡ್ಡಿ ನರಸಾರಡ್ಡಿ ಮಾತನಾಡಿ, ಮದ್ರಾಸ್ ಐ ಸಮಸ್ಯೆ ಹಿರಿಯರಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ಔಷಧ ಬಳಸುವುದು ಸೂಕ್ತ. ರೋಗಿಗಳು ಗಾಳಿಯಲ್ಲಿ ತಿರುಗಾಡಬಾರದು. ಬೈಕ್ ಓಡಿಸಬಾರದು. ಕಣ್ಣಿಗೆ ವಿಶ್ರಾಂತಿ ನೀಡಬೇಕು ಎಂದು ಹೇಳಿದರು.
ಪಿಡಿಒ ಮಲ್ಲಿಕಾರ್ಜುನ ಡೋಣೆ ಮಾತನಾಡಿದರು. ಮುಖಂಡರಾದ ಪ್ರಭುಶೆಟ್ಟಿ ಪಸರ್ಗಿ, ರಾಜಕುಮಾರ ಪೋಳ್, ಮಹೇಶ ಮಡಿವಾಳ ಇತರರಿದ್ದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ದಿವ್ಯಾ ಮನೋಹರ ಸ್ವಾಗತಿಸಿದರು. ಶಿಕ್ಷಕಿ ಸುನೀತಾ ಮೇತ್ರೆ ನಿರೂಪಣೆ ಮಾಡಿದರು. ಪ್ರೌಢ ಶಾಲೆ ಮುಖ್ಯ ಶಿಕ್ಷಕ ಲಕ್ಷ್ಮೀಕಾಂತ ವಂದಿಸಿದರು.