ಮದ್ರಾಸ್-ಐ ಭಯಬೇಡ, ಎಚ್ಚರಿಕೆ ಇರಲಿ

Madras-i Fear not be careful
Published on

ವಿಜಯಪುರ: ಮದ್ರಾಸ್ ಐ ಎಂದು ಕರೆಯಲ್ಪಡುವ ಕಂಜಕ್ಟವೈಟೀಸ್ ವೈರಸ್‌ನಿಂದ ಹರಡುವ ಕಾಯಿಲೆಯಾಗಿದ್ದು ಸಾರ್ವಜನಿಕರು ಭಯಪಡದೆ ಎಚ್ಚರಿಕೆಯಿಂದ ಇರಲು ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ. ಸಂಪತ್ ಗುಣಾರಿ ಸಲಹೆ ನೀಡಿದ್ದಾರೆ.

ಕಣ್ಣಿನ ಬಿಳಿಭಾಗವನ್ನು ಆವರಿಸುವ ಕಣ್ಣಿನ ಮುಂಭಾಗದಲ್ಲಿ ಪದರದ ಸೋಂಕಿಗೆ (ಊರಿ ಊತ) ಇದಕ್ಕೆ ಕಂಜಕ್ಟವೈಟೀಸ್ ಎನ್ನುತ್ತಾರೆ. ಇದು ಹೆಚ್ಚಾಗಿ ಮಳೆಗಾಲದ ಆರಂಭ ಹಂತದಲ್ಲಿ ಕಂಡುಬರುತ್ತದೆ. ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಬರುವ ದ್ರವದ ಸಂಪರ್ಕದಿಂದ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದರಿಂದ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.

ಈ ಖಾಯಿಲೆಯು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕಂಡು ಬರುತ್ತದೆ. ವಿಶೇಷವಾಗಿ ಶಾಲಾ ಕಾಲೇಜ್, ವಸತಿ ನಿಲಯಗಳಲ್ಲಿ ಮತ್ತು ಅತಿಥಿ ಗೃಹಗಳಲ್ಲಿ ಈ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚು. 3 ರಿಂದ 5 ದಿನಗಳಲ್ಲಿ ಗುಣಮುಖವಾಗುತ್ತದೆ. ಎಲ್ಲಾ ವಯಸ್ಸಿನವರಲ್ಲಿ ಈ ಕಾಯಿಲೆ ಕಂಡು ಬರುತ್ತದೆ.

ಲಕ್ಷಣಗಳು: ಕಣ್ಣು ಕೆಂಪಾಗುವಿಕೆ, ನೀರು ಸೋರುವಿಕೆ, ಅತಿಯಾದ ಕಣ್ಣೀರು, ಕಣ್ಣಿನಲ್ಲಿ ತುರಿಕೆ, ಸತತ ಕಣ್ಣು ನೋವು ಹಾಗೂ ಚುಚ್ಚುವಿಕೆ, ಬೆಳಕನ್ನು ನೋಡಲು ಸಾಧ್ಯವಾಗದಿರುವುದು, ದೃಷ್ಟಿ ಮಸುಕಾಗುವುದು, ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತ ದ್ರವದಿಂದ ಅಂಟಿರುವುದು, ರೆಪ್ಪೆ ಊದಿಕೊಳ್ಳುವುದು, ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ-ಸಲಹೆ ಪಡೆಯಬೇಕು.

ಚಿಕಿತ್ಸೆ : ಶುಚಿಯಾದ ಒದ್ದೆ ಮಾಡಿದ ಬಟ್ಟೆ ಅಥವಾ ಹತ್ತಿಯ ಉಂಡೆಗಳಿಂದ ಉಗುರು ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸುವುದು, ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಬಳಸುವುದು, ಶಾಲಾ ವಿದ್ಯಾರ್ಥಿ-ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಸೋಂಕು ಕಂಡು ಬಂದಲ್ಲಿ ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದು. ಸೋಂಕಿತ ವ್ಯಕ್ತಿ ಬಳಸಿದ ಕರವಸ ಹಾಗೂ ಇತರೆ ವಸಗಳನ್ನು ಬೇರೆಯವರು ಬಳಸಬಾರದು. ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು. ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದು ಉತ್ತಮ.

ಮುಂಜಾಗ್ರತಾ ಕ್ರಮಗಳು: ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯವಂತ ವ್ಯಕ್ತಿಯು ಕಣ್ಣಿನ ನೇರ ಸಂಪರ್ಕದಿಂದ ದೂರವಿರಬೇಕು. ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ತೊಳೆಯಬೇಕು. ಸೋಂಕಿತ ವ್ಯಕ್ತಿಗಳಿಗೆ ಶೀತ, ಕೆಮ್ಮು, ಜ್ವರ ಇದ್ದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು.
ಏನು ಮಾಡಬೇಕು: ಸ್ವಚ್ಛವಾದ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಬೇಕು. ಸೋಂಕು ಕಂಡು ಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ-ಸಲಹೆ ಪಡೆಯಬೇಕು. ಸೋಂಕಿತ ವ್ಯಕ್ತಿಗಳಿಗೆ ಪೌಷ್ಠಿಕ ಅಹಾರ ನೀಡಬೇಕು. ಸೋಂಕಿತ ವ್ಯಕ್ತಿಗಳು ಬಳಸಿದ ಕೈ ವಸ-ಟವೆಲ್ ಇನ್ನಿತರ ವಸ್ತುಗಳನ್ನು ಸಂಸ್ಕರಿಸಿ ಬಳಸಬೇಕು.
ಏನು ಮಾಡಬಾರದು : ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು. ಸ್ವಯಂ ಚಿಕಿತ್ಸೆ ವಿಧಾನಗಳನ್ನು ಮಾಡಬಾರದು. ಸೋಂಕಿತ ವ್ಯಕ್ತಿಯ ಸನಿಹದಿಂದ ದೂರವಿರಬೇಕು. ಸೋಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಮುಟ್ಟಬಾರದು.

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಥವಾ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಡಾ. ಸಂಪತ್ ಗುಣಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net