ಮದ್ಯಸೇವನೆ ಬಡ ವರ್ಗದವರಿಗೆ ಶಾಪ

12 skpp 1 (1)
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಹಮ್ಮಿಕೊಂಡಿದ್ದ 1615ನೇ ಮದ್ಯವರ್ಜನ ಶಿಬಿರವನ್ನು ಶಾಸಕ ಎಚ್.ಕೆ ಕುಮಾರಸ್ವಾಮಿ ಉದ್ಘಾಟಿಸಿದರು.
Published on

ಸಕಲೇಶಪುರ: ಮದ್ಯ ಸೇವನೆ ಬಡವರು ಹಾಗೂ ಮದ್ಯಮ ವರ್ಗದವರಿಗೆ ಶಾಪವಾಗಿದ್ದು, ಇದರಿಂದ ಮಾನಸಿಕ, ದೈಹಿಕ ಆರೋಗ್ಯ ಹದಗೆಡಲಿದೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಶನಿವಾರ ಪಟ್ಟಣದ ಓಂ ಮಂದಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಹಮ್ಮಿಕೊಂಡಿದ್ದ 1615ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮೋಜಿಗಾಗಿ ಆರಂಭವಾಗುವ ಕುಡಿತ ಸಂಸಾರದ ಸಂತೋಷವನ್ನೇ ಕಿತ್ತುಕೊಳ್ಳಲಿದೆ. ಮದ್ಯ ಸೇವಿಸುವುದರಿಂದಲೇ ಸಮಾಜದಲ್ಲಿ ಸಾಕಷ್ಟು ಕೆಡುಕುಗಳು ನಡೆಯುತ್ತಿವೆ. ಸರ್ಕಾರಗಳು ಮದ್ಯದಿಂದ ಸಂಗ್ರಹವಾಗುವ ತೆರಿಗೆ ಹಣದಾಸೆಗಾಗಿ ದೇಶದಲ್ಲಿ ಮದ್ಯಪಾನ ನಿಷೇಧ ಮಾಡುತ್ತಿಲ್ಲ. ಇಂತಹ ವ್ಯಸನದಿಂದ ಜನರನ್ನು ಮುಕ್ತಗೊಳಿಸಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಮದ್ಯವರ್ಜನ ಶಿಬಿರದ ಮೈಸೂರು ಪ್ರಾದೇಶಿಕ ವಲಯದ ಯೋಜನಾಧಿಕಾರಿ ಭಾಸ್ಕರ್ ಮಾತನಾಡಿ, ಶ್ರೀ ಧರ್ಮಸ್ಥಳ ಸಂಸ್ಥೆ ನಡೆಸುತ್ತಿರುವ 1600ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರದಿಂದ 1.5 ಲಕ್ಷ ಜನರು ಮದ್ಯವ್ಯಸನದಿಂದ ಮುಕ್ತರಾಗಿದ್ದಾರೆ. ಇದರಲ್ಲಿ ಶೇ.70 ರಷ್ಟು ಜನರು ಮದ್ಯತ್ಯಜಿಸಿ ಕುಟುಂಬದೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಮದ್ಯ ತ್ಯಜಿಸಲು ಯಾವುದೇ ಔಷಧಗಳು ಇಲ್ಲ. ಮನಪರಿವರ್ತನೆಯೆ ಇದಕ್ಕೆ ಮದ್ದು ಎಂದರು.

ಪಟ್ಟಣ ಠಾಣೆ ಪಿಎಸ್‌ಐ ಶಿವಶಂಕರ್ ಮಾತನಾಡಿ, ಕುಡಿತದಿಂದಲೇ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳು ಸಂಭವಿಸುತ್ತಿವೆ ಎಂದರು.

ಮದ್ಯವರ್ಜನ ಶಿಬಿರದ ಅಧ್ಯಕ್ಷ ವಿಜಯರಾಜ್, ಜಿ.ಪಂ. ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಯೋಜನಾ ಜಿಲ್ಲಾ ನಿರ್ದೇಶಕಿ ಮಮತಾ ಹರೀಶರಾವ್, ರೋಟರಿ ಸಂಸ್ಥೆ ಅಧ್ಯಕ್ಷ ಶಶಿಧರ್, ಲಯನ್ಸ್ ಅಧ್ಯಕ್ಷ ಜಯಶಂಕರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net