

ಕಡೂರು: ಮದ್ಯವರ್ಜನ ಶಿಬಿರ ಮದ್ಯವ್ಯಸನಿಗಳನ್ನು ಕತ್ತಲಿನಿಂದ ಬೆಳಕಿನೆಡೆಯ ಹೊಸ ಜೀವನಕ್ಕೆ ಕರೆದೊಯ್ಯುವ ಸಾಧನ ಎಂದು ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ 1980ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಒಂದು ವಾರದ ಶಿಬಿರದಲ್ಲಿ ಕಲಿತದ್ದನ್ನು ಜೀವನದಲ್ಲಿ ಅಳವಡಿಸಿಕೊಂಡು ಹೊಸ ಬದುಕಿಗೆ ಶಿಬಿರಾರ್ಥಿಗಳು ಕಾಲಿಟ್ಟಿದ್ದಾರೆ ಎಂದರು.
ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ, ಆರೋಗ್ಯಕರ ಸಮಾಜ ಸೃಷ್ಟಿಸಲು ಸಜ್ಜನರ ಸಹವಾಸ ಮಾಡಬೇಕು ಎಂದರು.
ಚಿತ್ರದುರ್ಗದ ಪ್ರಾದೇಶಿಕ ಯೋಜನಾಧಿಕಾರಿ ಬಿ.ಗೀತಾ ಮಾತನಾಡಿ, ಮದ್ಯವಸನಿಗಳ ಅನೇಕ ಕುಟುಂಬಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಶಿಬಿರ ಸಹಕಾರಿ ಎಂದರು.
ಶಿಬಿರಾರ್ಥಿ ಬಾಣೂರು ಗಿರೀಶ್ ಮಾತನಾಡಿ, ಸ್ನೇಹಿತರ ಸಹವಾಸ ದೋಷದಿಂದ ಕುಡಿತದ ದಾಸನಾಗಿ ಬದುಕನ್ನು ಹಾಳುಮಾಡಿಕೊಂಡಿದ್ದೆ. ನನ್ನ ಆರೋಗ್ಯ ಸರಿ ಇಲ್ಲದ ದಿನಗಳಲ್ಲಿ ತಂದೆ, ತಾಯಿಯೇ ಆರೈಕೆ ಮಾಡುತ್ತಿದ್ದರು. ಸಮಾಜದಲ್ಲಿ ಗೌರವ ಕಳೆದುಕೊಂಡೆ. ಶಿಬಿರದಿಂದ ಮಾದರಿಯಾಗಿ ಬದುಕುವ ಚೈತನ್ಯ ನನ್ನಲ್ಲಿ ಮೂಡಿದೆ ಎಂದರು. 53 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಶಂಕರ್, ತಾಲೂಕು ಯೋಜನಾಧಿಕಾರಿ ಬೇಬಿ, ಆಶಾ ತಮ್ಮಯ್ಯ, ನಾಗರಾಜ್ ಕುಲಾಲ್, ಸೋಮಶೇಖರ್, ಮಹೇಶ್ವರಪ್ಪ, ದಿನೇಶ್, ದಿವಾಕರ್ ಪೂಜಾರಿ, ಭಾಗ್ಯಾ, ಅಮಿತಾ, ತಿಮ್ಮಪ್ಪ ಇತರರಿದ್ದರು.