

ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಮದ್ಯಾ ಮಾರಾಟ ಮಾಡಲು ಪೊಲೀಸರೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಎಸ್ಟಿ ಸಮುದಾಯದ ಮುಖಂಡ ಜಯಸುಂದರ್ ಆರೋಪಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಎಸ್ಟಿ, ಎಸ್ಟಿ ಸಮುದಾಯದ ಹಲವಾರು ಸಮಸ್ಯೆಗಳನ್ನು ಚರ್ಚಿಸಲಾಯಿತು.
ನಾನು ಕೂಡ ಅಬಕಾರಿ ಇಲಾಖೆಯ ಸನ್ನದುದಾರನಾಗಿದ್ದು, ಇಲಾಖೆ ಲೈಸೆನ್ಸ್‌ನಂತೆ ವ್ಯಾಪಾರ ಮಾಡುತ್ತಿದ್ದೇನೆ. ಆದರೆ ಪೊಲೀಸರು ನನ್ನನ್ನು ವೈಯಕ್ತಿಕವಾಗಿ ಟಾರ್ಗೇಟ್ ಮಾಡುವ ಮೂಲಕ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಎಸ್ಸಿ,ಎಸ್ಟಿ ಸಮುದಾಯದವರು ಮದ್ಯ ವ್ಯಾಪಾರವನ್ನು ಮಾಡಬಾರದೇ ಎಂದು ಪ್ರಶ್ನಿಸಿದರು.
ಈ ವೇಳೆ ಎಸ್ಪಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಪಟ್ಟಣದ ವ್ಯಾಪ್ತಿಯಲ್ಲಿ ಈ ತಿಂಗಳಲ್ಲಿ 96 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಎಸ್ಸಿ,ಎಸ್ಟಿ ಕಾಲೋನಿಗಳಲ್ಲಿ ಅಕ್ರಮ ಮದ್ಯಮಾರಾಟ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಮಾಲೀಕರ ಮೇಲೂ ದೂರು ದಾಖಲಾಗುತ್ತಿದೆ. ಯಾರನ್ನು ಗುರಿಯಾಗಿಸಿಕೊಂಡು ಪೊಲೀಸರು ಪ್ರಕರಣಗಳನ್ನು ದಾಖಲು ಮಾಡುವುದಿಲ್ಲ. ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಪೊಲೀಸರನ್ನು ದಿಕ್ಕುತಪ್ಪಿಸಲು ಹೋಗಬಾರದು ಎಂದು ಗರಂ ಆದರು. ಈ ವೇಳೆ ಹಲವಾರು ದಲಿತ ಮುಖಂಡರು ಮಧ್ಯೆ ಪ್ರವೇಶಿಸಿ ಬೇರೆ ವಿಚಾರಗಳ ಕುರಿತು ಚರ್ಚಿಸುವಂತೆ ಮನವಿ ಮಾಡಿದರು.