ಮದ್ಯ ಸೇವನೆ ಚಟದಿಂದ ಜೀವನ ಹಾಳು

CTD DARAMSTALA---
Published on

ಚಿತ್ರದುರ್ಗ: ಮದ್ಯ ಸೇವನೆ ಚಟದಿಂದ ಜೀವನ ಹಾಳಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ ರಾಘವೇಂದ್ರ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಸಂಶೋಧನಾ ಕೇಂದ್ರ ಲಾಯಿಲ ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಎಂಟು ದಿನಗಳ 1895ನೇ ಮದ್ಯವರ್ಜನ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಕುಡಿತದಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುವುದಲ್ಲದೆ, ಆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಇಡೀ ಜೀವನ ಹಾಳಾಗುತ್ತದೆ. ಮದ್ಯ ವ್ಯಸನಿಗಳು ಶಿಬಿರದ ಪ್ರಯೋಜನ ಪಡೆದುಕೊಂಡು ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಮಂಜಪ್ಪ ಮಾತನಾಡಿ, ಕುಡಿತ ಬಿಟ್ಟರೆ ಇಡೀ ಕುಟುಂಬವೇ ಸುಖವಾಗಿರುತ್ತದೆ. ವ್ಯಸನಿಗಳು ಇನ್ನು ಮುಂದೆ ಮದ್ಯ ತ್ಯಜಿಸುವ ಸಂಕಲ್ಪ ಮಾಡಬೇಕು ಎಂದರು.

ಡಿವೈಎಸ್‌ಪಿ ಪಿ.ಕೆ. ದಿನಕರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ನಾಗರಾಜ್‌ಸಂಗಂ, ರೂಪಾ ಜನಾರ್ಧನ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿದರು. ಪರಮೇಶ್, ಬಿ. ಅಶೋಕ್, ಎಂ. ಬಾಲಕೃಷ್ಣ,ನಾಗರಾಜ್ ಮತ್ತಿತರರು ಇದ್ದರು.

ಕೋಟ್

ಮದ್ಯ ವ್ಯಸನ ಮನೆ, ಸಮಾಜದ ಶಾಂತಿ, ನೆಮ್ಮದಿಗೆ ಭಂಗವನ್ನುಂಟು ಮಾಡುತ್ತದೆ. ಕೊಲೆ, ದರೋಡೆ, ಸುಲಿಗೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಇಂಥ ಅಪಾಯಕಾರಿ ವ್ಯಸನದಿಂದ ದೂರ ಉಳಿದು ನವಜೀವನ ರೂಪಿಸಿಕೊಳ್ಳಬೇಕಿದೆ.

ಪಿ.ಕೆ. ದಿನಕರ್, ಡಿವೈಎಸ್‌ಪಿ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net