ಮದ್ಯ ವರ್ಜಿಸಿ ಸುಂದರ ಬದುಕು ರೂಪಿಸಿಕೊಳ್ಳಿ, ವೃತ್ತ ಶಿಕ್ಷಕ ಹುಸೇನಬಾಷಾ ಸಲಹೆ

SANMANA
Published on

ಸಿಂಧನೂರು: ಮದ್ಯ ಸೇವನೆಯಿಂದ ಬದುಕು ದುರ್ಬಲಗೊಳ್ಳುತ್ತದೆ. ಹೆಂಡತಿ-ಮಕ್ಕಳು ಉಪವಾಸ ಬೀಳುತ್ತಾರೆ. ಹೀಗಾಗಿ ಮದ್ಯ ವರ್ಜಿಸಿ ಜೀವನ ಜಯಿಸಬೇಕು ಎಂದು ನಿವೃತ್ತ ಶಿಕ್ಷಕ ಹುಸೇನಬಾಷಾ ಹೇಳಿದರು.

ನಗರದ ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು. ಮದ್ಯದ ಚಟಕ್ಕೆ ಬದಲಿಯಾದ ಅನೇಕರು ನಿತ್ಯವೂ ಕುಡಿದು ಬಂದು ಹೆಂಡತಿ, ಮಕ್ಕಳನ್ನು ಬಡಿದು ಅವರಿಂದ ಹಣ ಕಿತ್ತುಕೊಂಡು ತಮ್ಮ ಚಟಗಳಿಗೆ ವಿನಿಯೋಗಿಸುತ್ತಾ ಜೀವನ ಹಾಳು ಮಾಡಿಕೊಂಡಿದ್ದಾರೆ. ಬದುಕು ಬರಿದಾಗಿಸುವ ಮದ್ಯ ತ್ಯಜಿಸಿ ನೆಮ್ಮದಿಯ ನಾಳೆಗಳನ್ನು ಕಳೆಬೇಕು ಎಂದರು.

ವಕೀಲ ಪ್ರಹ್ಲಾದಗುಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ 1675 ಮದ್ಯವರ್ಜನ ಶಿಬಿರಗಳನ್ನು ಪೂರೈಸಿ, ಸಿಂಧನೂರಿನಲ್ಲಿ 1676ನೇ ಶಿಬಿರ ಆಯೋಜಿಸಲಾಗಿದೆ. ಎಲ್ಲ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಈ ಶಿಬಿರ ಒಂದು ವಾರ ನಡೆಯುತ್ತಿದ್ದು, ಮದ್ಯವ್ಯಸನಿಗಳು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಿ ವ್ಯಸನದಿಂದ ಮುಕ್ತರಾಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಳಗುರ್ಕಿಯ ರಾಜಯೋಗಿ ಶರಣ ಎರೆಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮೌಲಪ್ಪ ಮಾಡಸಿರವಾರ, ಬಸವಕೇಂದ್ರದ ಮಾಜಿ ಅಧ್ಯಕ್ಷ ಗುಂಡಪ್ಪ ಬಳಿಗಾರ ಮಾತನಾಡಿದರು.

ಯೋಜನಾಧಿಕಾರಿ ಶೇಖರ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಡಾ. ಶರಣಪ್ಪ ಗೊರೇಬಾಳ, ಕಾರ್ಯದರ್ಶಿ ತೋಟಯ್ಯ ದಂಡಿನ, ಸಹಕಾರ್ಯದರ್ಶಿಗಳಾದ ನಂದಾ, ಬಿ. ಪ್ರತಿಭಾ ಇದ್ದರು. ಸಮಾಜ ಸೇವಕ ಮುತ್ತು ಪಾಟೀಲ್, ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶರಣಪ್ಪ ಟೆಂಗಿನಕಾಯಿ, ಚಿತ್ರನಟ ಶಶಿದಾನಿ ಶಿಬಿರಕ್ಕೆ ಧನಸಹಾಯ ಮಾಡಿದ ಹಿನ್ನೆಲೆಯಲ್ಲಿ ವ್ಯವಸ್ಥಾಪನಾ ಸಮಿತಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net