ಮದ್ಯ ಕೊಡಿಸಲು ನಿರಾಕರಿಸಿದವನಿಗೆ ಅಪರಿಚಿತನಿಂದ ಹಲ್ಲೆ

crime
Published on

ಮೈಸೂರು: ದೇವರಾಜ ಮೊಹಲ್ಲಾದಲ್ಲಿ ಮದ್ಯ ಕೊಡಿಸಲು ನಿರಾಕರಿಸಿದ ಗಾರೆ ಕೆಲಸಗಾರನ ಮೇಲೆ ಅಪರಿಚಿತ ವ್ಯಕ್ತಿ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಕೆಆರ್‌ಎಸ್ ನಿವಾಸಿ ಮಧು(33) ಗಾಯಗೊಂಡವರು. ಕೈಲಾಸಪುರಂನಲ್ಲಿ ಗಾರೆ ಕೆಲಸಕ್ಕೆ ಬಂದಿದ್ದ ಇವರು, ದೇವರಾಜ ಮೊಹಲ್ಲಾದ ಲಾಡ್ಜ್‌ವೊಂದರಲ್ಲಿ ಉಳಿದುಕೊಂಡಿದ್ದರು.

ರಾತ್ರಿ 11ರ ಹೊತ್ತಿನಲ್ಲಿ ಲಾಡ್ಜ್ ಬಳಿ ಫುಟ್‌ಪಾತ್‌ನಲ್ಲಿ ಕುಳಿತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ನನ್ನ ಬಳಿ ಮದ್ಯ ಇದೆ, ಇಬ್ಬರೂ ಕುಡಿಯೋಣ ಎಂದಿದ್ದಾನೆ. ಬಳಿಕ ಸ್ವಲ್ಪ ಮದ್ಯವನ್ನು ಮಧುಗೆ ನೀಡಿ, ಉಳಿದಿದ್ದನ್ನು ತಾನೇ ಕುಡಿದಿದ್ದಾನೆ.

ನಂತರ ಎಣ್ಣೆ ಖಾಲಿಯಾಗಿದೆ, ನೀನು ಕೊಡಿಸು ಎಂದು ಕೇಳಿದ್ದಾನೆ.

ಆಗ ನನ್ನ ಬಳಿ ಹಣ ಇಲ್ಲ ಎಂದಿದ್ದಕ್ಕೆ ಸಿಟ್ಟಿಗೆದ್ದು, ಮಧುವನ್ನು ಜೋರಾಗಿ ತಳ್ಳಿ ಬೀಳಿಸಿ, ಆತನ ಬಲಗಾಲಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ನೋವು ತಾಳಲಾರದೆ ಜೋರಾಗಿ ಕಿರುಚಿಕೊಂಡಿದ್ದರಿಂದ ಸಾರ್ವಜನಿಕರು ಓಡಿಬಂದಿದ್ದಾರೆ.

ಅಷ್ಟರಲ್ಲಿ ಹಲ್ಲೆ ನಡೆಸಿದ ಅಪರಿಚಿತ ಪರಾರಿಯಾಗಿದ್ದಾನೆ. ಸಾರ್ವಜನಿಕರು ಗಾಯಗೊಂಡಿದ್ದ ಮಧುವನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಟ್ರಾಮಾ ಕೇರ್ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net