ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ

21HDK1
ಎಚ್.ಡಿ.ಕೋಟೆ ಪಟ್ಟಣದ ಪೊಲೀಸ್ ವತ್ತ ನಿರೀಕ್ಷಕ ಕಚೇರಿಯಲ್ಲಿ ಎಸ್ ಸಿ/ಎಸ್ ಟಿ ಹಿತರಕ್ಷಣಾ ಸಭೆ ಪೊಲೀಸ್ ವೃತ್ತ ನಿರೀಕ್ಷಕ ಶಬ್ಬೀರ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆಯಿತು.
Published on

ಎಚ್.ಡಿ.ಕೋಟೆ: ದಲಿತ ಕೇರಿಗಳ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದಿಂದ ಗ್ರಾಮಗಳಲ್ಲಿ ಅಶಾಂತಿಗೆ ಕಾರಣವಾಗಿದ್ದು, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಶಾಂತಿ ಉಂಟಾಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಜಮೀನು ಸಮಸ್ಯೆ ಹೆಚ್ಚಾಗಿದ್ದು, ಬಡವರಿಗೆ ನ್ಯಾಯ ದೊರಕಿಸಿ ಕೊಡಲು ಪೊಲೀಸರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಶಬ್ಬೀರ್ ಹುಸೇನ್, ಜಮೀನು ವಿಚಾರದಲ್ಲಿ ನಾವು ನೇರವಾಗಿ ಭಾಗಿಯಾಗಲು ಸಾಧ್ಯವಿಲ್ಲ. ತಹಸೀಲ್ದಾರ್ ಆಥವಾ ನ್ಯಾಯಾಲಯದ ಮೂಲಕ ನಿರ್ದೇಶನ ಬಂದರೆ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಮುಖಂಡ ಹೈರಿಗೆ ಶಿವರಾಜು ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ದೇವಸ್ಥಾನಗಳಿಗೆ ದಲಿತ ಜನಾಂಗಕ್ಕೆ ಮುಕ್ತ ಪ್ರವೇಶ ಇಲ್ಲ. ಇದರ ಬಗ್ಗೆ ಗಂಭೀರ ಚರ್ಚೆ ಆಗಬೇಕು, ಜತೆಗೆ ದೇವಸ್ಥಾನ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಸಬ್ ಇನ್ಸ್‌ಪೆಕ್ಟರ್ ರಸುಲಾ ಪಾಗವಾಲೆ ಮಾತನಾಡಿ, ಕೋಳಗಾಲ, ಎಚ್.ಮಟಕೆರೆ, ಬೊಪ್ಪನಹಳ್ಳಿ ಹಾಗೂ ಎಚ್.ಡಿ.ಕೋಟೆ ಪಟ್ಟಣ ಸೇರಿದಂತೆ ಐದು ಸಾಮಾಜಿಕ ಬಹಿಷ್ಕಾರ ದೂರುಗಳು ನ್ಯಾಯಾಲಯದಲ್ಲಿ ಇದ್ದು, ಈ ಬಗ್ಗೆ ನ್ಯಾಯಧೀಶರು ಪ್ರಕರಣ ದಾಖಲು ಮಾಡುವಂತೆ ತಾಕೀತು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಒಂದೇ ಸಮುದಾಯದ ಜನರು ಅದೇ ಸಮುದಾಯದ ವ್ಯಕ್ತಿಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿದರೆ ಯಾವ ರೀತಿ ಸಮಸ್ಯೆ ಬಗೆಹರಿಸಲು ಸಾಧ್ಯ? ಹಾಗಾಗಿ ಮುಖಂಡರು ಗ್ರಾಮಕ್ಕೆ ತೆರಳಿ ಜನರಿಗೆ ತಿಳಿವಳಿಕೆ ನೀಡಿ ಸ್ಥಳೀಯವಾಗಿ ಸಮಸ್ಯೆ ಇತ್ಯರ್ಥ ಮಾಡಲು ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿ, ಅಬಕಾರಿ ನಿರೀಕ್ಷಕಿ ಗೀತಾ, ಜಿವಿಕ ಬಸವರಾಜು, ಉಮೇಶ್, ಸಣ್ಣಕುಮಾರ್, ಮುದ್ದಮಲ್ಲಯ್ಯ, ಶಿವಕುಮಾರ್, ಪ್ರಕಾಶ್, ಶಿವಯ್ಯ, ಕಾಳಪ್ಪಾಜಿ, ನಂದೀಶ, ಪುಟ್ಟಬಸವಯ್ಯ, ಶಿವಶಂಕರ, ಬೆಟ್ಟನಾಯಕ, ಮಟಕೆರೆ ಕೃಷ್ಣ, ಸಿದ್ದಪ್ಪಾಜಿ, ಸದಾಶಿವ, ರಸುಲಾ ಪಾಗವಾಲೆ, ರಾಮಸ್ವಾಮಿ, ಯೋಗೇಶ, ಮಹಾದೇವಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net