ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲು ಒತ್ತಾಯ: ದಲಿತ ಮುಖಂಡರ ಒತ್ತಾಯ
Published on:
Copied
Follow Us
ಮೈಸೂರು : ದಲಿತ ಕೇರಿ ಹಾಗೂ ಗಿರಿಜನ ಹಾಡಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು.
ಎಚ್.ಡಿ.ಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ದಲಿತ ಸಂಘಟನೆಗಳ ಮಾಸಿಕ ಸಭೆಯಲ್ಲಿ ಮುಖಂಡ ಚಾ. ಶಿವಕುಮಾರ್ ಮಾತನಾಡಿ, ಪಟ್ಟಣದಲ್ಲಿ ಬೆಳಗ್ಗೆ 5 ಗಂಟೆಗೆ ಅಕ್ರಮ ಮದ್ಯ ಸಿಗುವುದರಿಂದ ಜನರು ಬೇಗ ಕುಡಿದು ಅಕ್ರಮ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕು. ತಾಲೂಕಿನ ಜಿ.ಎಂ.ಹಳ್ಳಿ ಗ್ರಾಮ ಹಾಗೂ ಪಕ್ಕದ ಹಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅವರ ಮೇಲೆ ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು ಪೊಲೀಸ್ ಇಲಾಖೆ ಬೀಟ್ ವ್ಯವಸ್ಥೆ ಮಾಡಿ ಕುಡುಕರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಇನ್ಸ್‌ಪೆಕ್ಟರ್ ಬಸವರಾಜು ಮಾತನಾಡಿ, ದಲಿತ ಕೇರಿಗಳಲ್ಲಿ ಹಾಗೂ ಹಾಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ಹತೋಟಿ ತರುವಲ್ಲಿ ಪೊಲೀಸ್ ಇಲಾಖೆ ಮುಂಚೂಣಿಯಲ್ಲಿದೆ. ಅಬಕಾರಿ ಇಲಾಖೆಯವರಿಗಿಂತ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತದೆ ಎಂಬ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ, ತಾಲೂಕಿನ ರಾಜೇಗೌಡನಹುಂಡಿ ಗ್ರಾಮದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಟ್ಟಿಲ್ಲ ಎಂಬ ವಿಚಾರಕ್ಕೆ ಈಗಾಗಲೇ ಶಾಲೆಯ ಮುಖ್ಯ ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಆದರೆ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಮದ ಕೆಲವು ಕೋಮಿನ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಕೊಡುತ್ತಿದ್ದಾರೆ. ಜತೆಗೆ ಗ್ರಾಮದಲ್ಲಿ ಆಶಾಂತಿಗೆ ಕಾರಣವಾಗಿದೆ. ದಲಿತ ಸಮುದಾಯ ಭಯದ ವಾತಾವರಣದಲ್ಲಿ ಇರುವಂತೆ ಆಗಿದೆ. ಹಾಗಾಗಿ ಇಂತಹ ಕ್ಷುಲ್ಲಕ ಘಟನೆಗೆ ಕಾರಣವಾಗಿರುವವರ ಮೇಲೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಗ್ರಾಮದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಬದುಕಲು ಅವಕಾಶ ಕಲ್ಪಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಇನ್ಸ್‌ಪೆಕ್ಟರ್ ಬಸವರಾಜು, ಈಗಾಗಲೇ ಗ್ರಾಮಕ್ಕೆ ಎರಡು ಮೂರು ಬಾರಿ ಹೋಗಿ ಗ್ರಾಮದ ಮುಖಂಡರಿಗೆ ಮನವರಿಕೆ ಮಾಡಿಕೊಡಲಾಗಿದೆ. ಕೆಲವರು ಅಮಾನತು ಆಗಿರುವ ಶಿಕ್ಷಕ ಮತ್ತೆ ಇದೇ ಶಾಲೆಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ಜತೆಗೆ ತಾಲೂಕಿನ ಎಲ್ಲ ಸಮುದಾಯದ ಮುಖಂಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿ ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಶಾಂತಿ ಕಾಪಾಡುವ ಭರವಸೆ ನೀಡಿದರು. ದಸಂಸ ತಾಲೂಕು ಸಂಚಾಲಕ ಸಣ್ಣಕುಮಾರ್ ಮಾತನಾಡಿ, ಇತೀಚಿಗೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಮಗ ಪ್ರಿಯಾಂಕ್ ಖರ್ಗೆ ಅವರ ಕುಟುಂಬದ ಬಗ್ಗೆ ಕಟ್ಟೇಮನುಗನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಅಶ್ಲೀಲ ಪದ ಬಳಕೆ ಮಾಡಿ ಫೇಸ್‌ಬುಕ್‌ನಲ್ಲಿ ತೇಜೋವಧೆ ಮಾಡಿದ್ದಾನೆ. ಜತೆಗೆ ಆ ವ್ಯಕ್ತಿ ಹಾಗೂ ಆತನ ಸಹೋದರ ಕಟ್ಟೇಮನುಗನಹಳ್ಳಿ ಗ್ರಾಮದಲ್ಲಿ ಈ ಹಿಂದೆ ಎರಡು ಸಮುದಾಯದ ಗಲಾಟೆಗೆ ಕಾರಣನಾಗಿ, ಗ್ರಾಮದಲ್ಲಿ ಅಶಾಂತಿ ಉಂಟಾಗಲು ಕಾರಣರಾಗಿದ್ದಾರೆ. ಹಾಗಾಗಿ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಈ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇನ್ಸ್‌ಪೆಕ್ಟರ್ ಈಗಾಗಲೇ ಫೇಸ್‌ಬುಕ್‌ನಲ್ಲಿ ತೇಜೋವಧೆ ಮಾಡಿದ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ಮತ್ತೆ ಇಂತಹ ಘಟನೆ ಮರುಕಳಿಸದ ರೀತಿಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ನಿಮ್ಮ ದೂರಿನ ಬಗ್ಗೆ ನಮ್ಮ ಇಲಾಖೆ ಮೇಲ್ಪಟ್ಟ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮುಖಂಡರು ಹಲವಾರು ಸಮಸ್ಯೆಗಳನ್ನು ಇನ್ಸ್‌ಪೆಕ್ಟರ್ ಗಮನಕ್ಕೆ ತಂದು ಇತ್ಯರ್ಥಪಡಿಸಲು ಮನವಿ ಮಾಡಿದರು. ದಲಿತ ಮುಖಂಡರಾದ ಚಾ.ನಂಜುಂಡಮೂರ್ತಿ, ಸೋಗಹಳ್ಳಿ ಶಿವಣ್ಣ, ಆನಗಟ್ಟಿ ದೇವರಾಜು, ರೈತ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ನಾಯಕ, ಟೌನ್ ಅಧ್ಯಕ್ಷ ಹೋಟೆಲ್ ಪ್ರಸಾದ್, ಗಿರಿಜನ ಮುಖಂಡರಾದ ಸೋಮಣ್ಣ, ವಡ್ಡರಗುಡಿ ಚಿಕ್ಕಣ್ಣ, ಪರಶಿವಮೂರ್ತಿ, ಬೆಟ್ಟನಾಯಕ, ಶಿವಯ್ಯ, ಕಂದೇಗಾಲ ನಾಗರಾಜು, ಕಾಳಪ್ಪಾಜಿ, ಗ್ಯಾಸ್ ಪ್ರಕಾಶ್ ಇದ್ದರು.